ಜಿಲ್ಲೆ

ಭಾರತೀಯರದ್ದು ಆರೋಗ್ಯಪೂರ್ಣ ಆಹಾರಪದ್ಧತಿ: ಅನಂತಕುಮಾರ್​ ಹೆಗಡೆ

ಉಡುಪಿ: ಭಾರತೀಯ ಆಹಾರಪದ್ಧತಿ ಆರೋಗ್ಯಪೂರ್ಣವಾಗಿದೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ. ಜಗತ್ತಿಗೆ ಆರೋಗ್ಯಕರ ಆಹಾರ ನೀಡುವ ಯೋಗ್ಯತೆ ಇರುವುದು ಭಾರತಕ್ಕೆ ಮಾತ್ರ. ನಮ್ಮ ಸಾಂಪ್ರದಾಯಿಕ ಅಡುಗೆಗಳಲ್ಲಿಯೂ ಆರೋಗ್ಯದ ಪರಿಕಲ್ಪನೆ ಇದೆ. ಆಹಾರವೇ ಔಷಧ ಎಂಬ ಮಾತಿದೆ. ಭವಿಷ್ಯದಲ್ಲಿ ಆಹಾರವನ್ನೇ ಔಷಧವಾಗಿ ನೀಡಲು ಸಮರ್ಥನಾದವನು ಗೆಲ್ಲುತ್ತಾನೆ. ಇದಕ್ಕೆ ಜ್ಞಾನಾಧಾರಿತ ಆರ್ಥಿಕತೆ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕದಂಬ ಸಮೂಹ ಸಂಸ್ಥೆ ಮುಖ್ಯಸ್ಥ ಅನಂತಕುಮಾರ ಹೆಗಡೆ ಹೇಳಿದರು.

ಶನಿವಾರ ಎಂಜಿಎಂ ಕಾಲೇಜು ಆವರಣದಲ್ಲಿ ಸಮತ್ವ ಮತ್ತು ಸದ್ಗುರು ಸೌಹಾರ್ದ ಸಹಕಾರಿ, ನಮ್ಮವರ ಬಜಾರ್​, ವಿಪ್ರ ಬಿಸಿನೆಸ್​ ಫೋರಮ್​ ಮತ್ತು ಬ್ರಾಂಡ್​ ಮ್ಯಾನ್​ ಡಿಇಸಿಎ ಪೆವೇಟ್​ ಲಿಮಿಟೆಡ್​ ಸಹಯೋಗದಲ್ಲಿ ಆಯೋಜಿಸಲಾದ 2 ದಿನಗಳ ಆಹಾರ, ಆರೋಗ್ಯ ಮತ್ತು ಹಣಕಾಸು ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಯುರ್ವೇದವನ್ನು ಪರ್ಯಾಯ ಔಷಧೀಯ ಪದ್ಧತಿ ಎನ್ನಲಾಗುತ್ತದೆ. ಆದರೆ ಆಯುರ್ವೇದ ಆಹಾರೋದ್ಯಮ ಮುಂದಿನ ತಲೆಮಾರನ್ನು ಆಳಲಿದೆ. ಮುಂದಿನ ಪೀಳಿಗೆಯ ಆಹಾರೋದ್ಯಮ ಜಾಗತಿಕವಾಗಿ 280 ರಿಂದ 300 ಬಿಲಿಯನ್​ ಡಾಲರ್​ ಮೌಲ್ಯ ಹೊಂದಲಿದ್ದು, ಸಾವಿರಾರು ಜನರು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ ಎಂದರು.

ಯುವಜನರಲ್ಲಿರುವ ಸೀಮಿತ ದೃಷ್ಟಿಕೋನ ನಿರುದ್ಯೋಗಕ್ಕೆ ಸಮಸ್ಯೆಗೆ ಮೂಲ ಕಾರಣ. ಇದಕ್ಕೆ ಸರ್ಕಾರ ಹೊಣೆಯಲ್ಲ. ಉದ್ಯೋಗ ಸಿಕ್ಕಿದರೆ ಸಾಕು ಎಂಬ ಪ್ರವೃತ್ತಿಯಿಂದ ಮಹತ್ವಾಕಾಂೆ ನಶಿಸಿಹೋಗುತ್ತಿದೆ. ಆಹಾರವೂ ಉದ್ಯಮವಾಗಿ ಬೆಳೆದಿದೆ. ಮುಂದಿನ ತಲೆಮಾರಿನ ಆಹಾರೋದ್ಯಮ ಹೇಗಿರುತ್ತದೆ ಎಂಬ ಪರಿಕಲ್ಪನೆ ಅಗತ್ಯ. 50 ವರ್ಷದ ಮುಂದಾಲೋಚನೆಯಿಂದ ಕಾರ್ಯಪ್ರವೃತ್ತರಾದವರು ಯಶಸ್ಸು ಕಾಣುತ್ತಾರೆ ಎಂದರು.

ಕರ್ನಾಟಕ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ ಸಾಮಗ ಮತ್ತು ಬೆಂಗಳೂರು ಇಂಡಿಯಾ ಸ್ವೀಟ್​ ಹೌಸ್​ನ ಸಂಸ್ಥಾಪಕ ವಿಶ್ವನಾಥ್​ ಭಟ್​, ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷಿ$್ಮನಾರಾಯಣ ಕಾರಂತ್​ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಸದ್ಗುರು ಸಂಸ್ಥೆಯ ಮೊಬೈಲ್​ ಆಪ್​ ಮತ್ತು 'ಹಲೋ ಉಡುಪಿ' ಸ್ಮರಣ ಸಂಚಿಕಯನ್ನು ಅನಾವರಣ ಮಾಡಲಾಯಿತು. ಸದ್ಗುರು ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಡಾ. ಬಿ.ಎನ್​. ಶಾಂತಪ್ರಿಯ ಸ್ವಾಗತಿಸಿದರು. ಶ್ರೀನಿವಾಸ ಐತಾಳ್​ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಅತಿಥಿಗಳನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಹಾರ, ಆರೋಗ್ಯ ಮತ್ತು ಜೀವನಶೈಲಿ, ಹಾಗೂ ಸುಸ್ಥಿರ ಹಣಕಾಸು ನಿರ್ವಹಣೆ ಕುರಿತು ಗೋಷ್ಠಿಗಳು ನಡೆಯಿತು.