ಜಿಲ್ಲೆ

‘ಆಯುಷ್ ಕಪ್’ ಕ್ರಿಕೆಟ್ ಟೂರ್ನಿಗೆ ಚಾಲನೆ

Mysuru

ಮೈಸೂರು: ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವು ಗೌತಮ್ ಹಾಸ್ಟೆಲ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಆಯುಷ್ ನೌಕರರ ‘ಆಯುಷ್ ಕಪ್’ ಕ್ರಿಕೆಟ್ ಟೂರ್ನಿಗೆ ಶುಕ್ರವಾರ ಚಾಲನೆ ದೊರೆಯಿತು.

ಟೂರ್ನಿಯಲ್ಲಿ ಮೈಸೂರು, ಶಿವಮೊಗ್ಗ, ಬೆಂಗಳೂರು, ಬಳ್ಳಾರಿಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಸೇರಿದಂತೆ ರಾಜ್ಯಾದ್ಯಂತ ಒಟ್ಟು 9 ತಂಡಗಳು ಭಾಗವಹಿಸಿವೆ.

ಕರ್ನಾಟಕ ರಾಜ್ಯ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಕೆ.ರಾಮು ಟೂರ್ನಿಗೆ ಚಾಲನೆ ನೀಡಿ ಶುಭ ಕೋರಿದರು. ಕೆಎಸ್‌ಸಿಎ ಮೈಸೂರು ವಿಭಾಗದ ಸಂಚಾಲಕ ಸುಧಾಕರ್ ರೈ, ಆಯುಷ್ ನಿರ್ದೇಶನಾಲಯದ ಜಂಟಿ ನಿರ್ದೇಶಕ ಡಾ.ಎಂ. ಪ್ರಕಾಶ್‌ಕುಮಾರ್, ಹೋಮಿಯೋಪತಿ ವಿಭಾಗದ ಉಪನಿರ್ದೇಶಕ ಡಾ.ಸಿ.ಬಿ. ನಂಜರಾಜ, ಲೆಕ್ಕಾಧಿಕಾರಿ ಸತೀಶ್ ಕುಮಾರ್, ಪ್ರಾಂಶುಪಾಲ ಡಾ.ಗಜಾನನ ಹೆಗಡೆ ಸೇರಿದಂತೆ ಇತರರು ಭಾಗವಹಿಸಿದ್ದರು.