ಮುಂಡರಗಿ: ತಾಲೂಕಿನ ಜಂತ್ಲಿ- ಶಿರೂರ, ಹಿರೇವಡ್ಡಟ್ಟಿ ಭಾಗದ ರೈತರ ಹೊಲದಲ್ಲಿ ಕಳ್ಳತನವಾಗಿದ್ದ ಡ್ರಿಪ್‌ಪೈಪ್ ಬಂಡಲ್‌ಗಳನ್ನು ಹಾಗೂ ಅತ್ತಿಕಟ್ಟಿ ತಾಂಡಾ ಭಾಗದಲ್ಲಿ ಕಳ್ಳತನವಾಗಿದ್ದ ಪವನ ವಿದ್ಯುತ್ ಕಂಬದಲ್ಲಿನ ಕಾಪರ್ ಕೇಬಲ್ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕಳ್ಳತನದಲ್ಲಿ ಭಾಗಿಯಾಗಿದ್ದ 9 ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ.
ಹಿರೇವಡ್ಡಟ್ಟಿಯ ಮೈಲಾರಪ್ಪ ಹನುಮಂತಪ್ಪ ಕಾಡಣ್ಣವರ, ನಾಗರಾಜ ಕಣಿವೆಪ್ಪ ಬಾಲಣ್ಣವರ, ಮಾಬೂಸಾಬ್ ಮಹ್ಮದಸಾಬ್ ಕೋಲಕಾರ, ಶರಣಪ್ಪ ವಿರೂಪಾಕ್ಷಪ್ಪ ಮೇವುಂಡಿ ಬಂಧಿತರು.
2024ನೇ ಸಾಲಿನಲ್ಲಿ ಜಂತ್ಲಿ- ಶಿರೂರ, ಹಿರೇವಡ್ಡಟ್ಟಿ ಭಾಗದ ರೈತರ ಹೊಲದಲ್ಲಿ ಡ್ರಿಪ್‌ಪೈಪ್ ಬಂಡಲ್‌ಗಳು ಹಾಗೂ ಅತ್ತಿಕಟ್ಟಿ ತಾಂಡಾ ಭಾಗದ ಗಾಳಿ ವಿದ್ಯುತ್ ಕಂಬದಲ್ಲಿನ ಕಾಪರ್ ಕೇಬಲ್ ಕಳ್ಳತನವಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದರು. ಇದಕ್ಕಾಗಿ ಗದಗ ಎಸ್‌ಪಿ ಬಿ.ಎಸ್. ನೇಮಗೌಡ ವಿಶೇಷ ತಂಡ ರಚಿಸಿದ್ದರು.
ಹೆಚ್ಚುವರಿ ಎಸ್‌ಪಿ ಎಂ.ಬಿ. ಸಂಕದ, ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ವಿ.ಜೆ. ಪವಾರ, ಬಿ.ಎನ್. ಯಳವತ್ತಿ ಹಾಗೂ ನುರಿತ ಪೊಲೀಸ್ ಸಿಬ್ಬಂದಿ ಕಳ್ಳತನ ಪ್ರಕರಣ ಪತ್ತೆ ಮಾಡಿದ್ದಾರೆ.
ಎಸ್‌ಪಿ ಬಿ.ಎಸ್. ನೇಮಗೌಡ ಮಾತನಾಡಿ, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇದಕ್ಕೆ ಸಂಬಂಧಿಸಿದ ಇನ್ನೂ ಐವರು ಪರಾರಿಯಾಗಿದ್ದಾರೆ. ಅವರ ಪತ್ತೆಯೂ ಮುಂದುವರಿದಿದೆ. ಒಟ್ಟು 8 ಲಕ್ಷ 85 ಸಾವಿರ ರೂ.ಮೌಲ್ಯದ ಸುಮಾರು 204 ಡ್ರಿಪ್‌ಪೈಪ್ ಬಂಡಲ್ ಹಾಗೂ ಪವನ ವಿದ್ಯುತ್ ಕಂಬದಲ್ಲಿನ ಕಾಪರ್ ಕೇಬಲ್ ಮತ್ತು ಕಳ್ಳತನಕ್ಕೆ ಉಪಯೋಗಿಸಿದ್ದ ಟಾಟಾ ಇಂಟ್ರಾ ವಾಹನ ವಶಕ್ಕೆ ಪಡೆಯಲಾಗಿದೆ.
ಕಳ್ಳತನವಾಗಿದ್ದ ಟ್ರಾೃಕ್ಟರ್ ಮತ್ತು ಟ್ರೇಲರ್ ಪತ್ತೆ ಮಾಡಲು ಶ್ರಮಿಸಿದ ಪೊಲೀಸರಿಗೆ ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಡಿಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ವಿ.ಜೆ. ಪವಾರ, ಬಿ.ಎನ್. ಯಳವತ್ತಿ, ಎಎಸ್‌ಐ ಎಸ್.ಎಂ. ಹಡಪದ, ಸಿಬ್ಬಂದಿ ಜೆ.ಐ. ಬಚ್ಚೇರಿ, ಲಕ್ಷ್ಮಣ ಲಮಾಣಿ, ಮಹೇಶ ಗೊಳಗೊಳಕಿ, ಎಸ್.ಎಚ್.ಡೊಣಿ, ಮಲ್ಲಿಕಾರ್ಜುನ ಬನ್ನಿಕೊಪ್ಪ ಇತರರಿದ್ದರು.