ಭಟ್ಕಳ: ಇಲ್ಲಿನ ಬಂದರ್ ರಸ್ತೆಯ ಈದ್ಗಾ ಮೈದಾನದ ಹೊರಭಾಗದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ದಿನನಿತ್ಯ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ.
ಆದರೆ ಪುರಸಭೆ ಮಾತ್ರ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು ಒಂದು ವಾರದಿಂದ ಇಲ್ಲಿನ ಬಂದರಿಗೆ ಹಾಗೂ ಆ ಭಾಗದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಒಡೆದಿತ್ತು. ಅಲ್ಲಿನ ಸ್ಥಳೀಯರು ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಆದರೂ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ಅದನ್ನು ದುರಸ್ತಿ ಗೊಳಿಸಿಲ್ಲ. ಪ್ರತಿದಿನ ಲಕ್ಷಾಂತರ ಲೀ. ನೀರು ಪೋಲಾಗಿ ಹೋಗುತ್ತಿದೆ. ಮಾತ್ರವಲ್ಲದೆ ಸ್ಥಳದಲ್ಲೂ ಕೃತಕ ಕೆರೆ ಸೃಷ್ಟಿಯಾಗಿದೆ. ಕೂಡಲೆ ಪುರಸಭೆ ಅಧಿಕಾರಿಗಳು ನೀರು ಪೋಲಾಗದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.