ಮುದ್ದೇಬಿಹಾಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು. ಚನ್ನಪ್ಪ ಕಂಠಿ, ಬಸವರಾಜ ಮುರಾಳ, ಸದಾಶಿವ ಮಾಗಿ, ಬಸಪ್ಪ ತಟ್ಟಿ, ಜಗದೀಶ ಪಂಪಣ್ಣವರ್, ಸಂಜು ಬಾಗೇವಾಡಿ, ಗೌರಮ್ಮ ಹುನಗುಂದ, ಸಂಗಮೇಶ ನಾಗೂರ ಮತ್ತಿತರರಿದ್ದಾರೆ. 
ಜಿಲ್ಲೆ

ಕುಡಿಯುವ ನೀರಿನ ಕಾಮಗಾರಿ ಕಳಪೆ

Vijayapura - Desk - Gurappa Lokuri

ಮುದ್ದೇಬಿಹಾಳ: ಪಟ್ಟಣದಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯ 30 ಕೋಟಿ ರೂ. ಅನುದಾನ ಬಳಸಿ ಕೈಗೊಂಡಿರುವ 24*7 ಕುಡಿಯುವ ನೀರಿನ ಕಾಮಗಾರಿಗೆ ಎ್ಎಸ್‌ಎಸ್‌ಐ ಫುಡ್‌ಗ್ರೇಡ್ ಗುಣಮಟ್ಟದ ಸ್ಟೇನ್‌ಲೆಸ್ ಸ್ಟೀಲ್ ಪೈಪ್ ಬಳಸಿಲ್ಲ. ಇದು ಕಳಪೆ ಕಾಮಗಾರಿಗೆ ದಾರಿ ಮಾಡಿಕೊಡಲಿದೆ. ಸಾರ್ವಜನಿಕರು ಈಗಲೇ ಜಾಗ್ರತರಾಗಿ ತಡೆಗಟ್ಟಬೇಕು. ಇಲ್ಲದಿದ್ದರೆ ಹಿಂದಿನ 50 ಕೋಟಿ ರೂ. ಅನುದಾನದ ಒಳಚರಂಡಿಯಂತೆ ಈ ಕಾಮಗಾರಿಯೂ ಹಳ್ಳ ಹಿಡಿಯಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಇಲ್ಲಿನ ಗೃಹಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಟರ್ ಅಳವಡಿಸಿ ಹಣ ಪಡೆದು ನೀರು ಕೊಡುವ ಯೋಜನೆ ಇದಾಗಿದೆ. ಜನ ದುಡ್ಡು ಕೊಟ್ಟು ನೀರು ತಗೋಬೇಕಾದರೆ ಅವರಿಗೆ ನೀರು ಪೂರೈಸಲು ಗುಣಮಟ್ಟದ ಪೈಪ್ ಬಳಸಬೇಕು. ಕೇಂದ್ರ ಸರ್ಕಾರದ ಶೇ.50, ರಾಜ್ಯ ಸರ್ಕಾರದ ಶೇ.35, ಪುರಸಭೆಯ ಶೇ. 15 ಅನುದಾನ ಎಂದಿದ್ದರೂ ಕೇಂದ್ರದ ಶೇ.50 ಅನುದಾನದಲ್ಲೇ ಇಡೀ ಕಾಮಗಾರಿ ಮುಗಿಸುವ ಹುನ್ನಾರ ಕಳಪೆ ಕಾಮಗಾರಿಗೆ ದಾರಿ ಮಾಡಿಕೊಡಲಿದೆ ಎಂದರು.

ನಾನು ಶಾಸಕನಾಗಿದ್ದಾಗ ಮಾಡಿಸಿರುವ ಗುಣಮಟ್ಟದ ಸಿಸಿ ರಸ್ತೆಗಳು ಹಾಳಾಗದಂತೆ ನೋಡಿಕೊಳ್ಳಲು ರಸ್ತೆ ಎರಡೂ ಬದಿ ಯುಟಿಲಿಟಿಗಾಗಿ ಜಾಗ ಬಿಡಲಾಗಿದೆ. ಅಲ್ಲಿಯೇ ಮೇಲ್ಭಾಗದಲ್ಲಿ ಸ್ಟೀಲ್ ಪೈಪ್ ಹಾಕಬೇಕು. 2 ವರ್ಷದಲ್ಲೇ ಹಾಳಾಗುವ ಪೈಪ್ ಬಳಸಿದರೆ ಚರಂಡಿ ಕೊಳಚೆ ಮಿಕ್ಸ್ ಆಗಿ ಹಣ ಕೊಟ್ಟು ಚರಂಡಿ ನೀರು ಪಡೆಯುವ ಸಂಭವ ಮುಂದಿನ ದಿನಗಳಲ್ಲಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ನನ್ನ ಅವಧಿಯಲ್ಲಿ ಕೆಲಸಗಳಿಗೆ ಅಡ್ಡಿಪಡಿಸಿ ಹೋರಾಟ ನಡೆಸುತ್ತಿದ್ದ ಪುರಸಭೆಯ ಕೆಲ ಸದಸ್ಯರು ಈಗೆಲ್ಲಿದ್ದಾರೆ. ಇವರ ಕಣ್ಣಿಗೆ ಕಳಪೆ ಕಾಮಗಾರಿ ಕಾಣುತ್ತಿಲ್ಲವೆ? ಆಯಾ ವಾರ್ಡ್‌ನಲ್ಲಿರುವ ಬಿಜೆಪಿ ಪುರಸಭೆ ಸದಸ್ಯರು ಕಳಪೆ ಕಾಮಗಾರಿಗೆ ಅವಕಾಶ ಕೊಡಬಾರದು ಎಂದು ತಿಳಿಸಿದರು.

ಅಭಿವೃದ್ಧಿಯಲ್ಲಿ ನಾನೆಂದೂ ರಾಜಕಾರಣ ಮಾಡಿಲ್ಲ. 24*7 ಕಾಮಗಾರಿಗೆ ಭೂಮಿಪೂಜೆ ನಡೆಸಿದ್ದ ಶಾಸಕರು, ಈ ಯೋಜನೆ ರೂಪಿಸಿದ ನನ್ನ ಹೆಸರನ್ನಾಗಲಿ, ಅನುದಾನ ನೀಡಿದ ಪ್ರಧಾನಿ ಮೋದಿ ಹೆಸರನ್ನಾಗಲಿ ಹೇಳಲು ನಿಮ್ಮ ನಾಲಿಗೆ ಬಿದ್ದು ಹೋಗಿತ್ತೆ? ನನ್ನ ಅವಧಿಯಲ್ಲಿ 4ಸಾವಿರ ಕೋಟಿ ರೂ. ಅನುದಾನ ತಂದಿದ್ದೇನೆ. ನಿಮ್ಮ ಅವಧಿಯಲ್ಲಿ ನಯಾ ಪೈಸೆ ಅನುದಾನ ತಂದಿಲ್ಲ. ನನ್ನ ಅವಧಿಯ ಕೆಲಸಗಳಿಗೆ ಭೂಮಿಪೂಜೆ ಮಾಡುತ್ತ ನಿಮ್ಮದೆಂದು ಹೇಳುತ್ತಿದ್ದೀರಿ ಎಂದು ಹರಿಹಾಯ್ದರು.

ಪಟ್ಟಣದಲ್ಲಿ ಒಳಚರಂಡಿಯ 2ಸಾವಿರ ಚೇಂಬರ್ ಮಾಡಿಲ್ಲ. ಹುಡ್ಕೋದಿಂದ ಆಲಮಟ್ಟಿ ರಸ್ತೆ ಸಂಪರ್ಕಿಸುವ ರಸ್ತೆ 18 ಮೀಟರ್ ಇತ್ತು. ಅದರಲ್ಲಿ 6 ಮೀಟರ್ ಕತ್ತರಿಸಿ 12 ಮೀಟರ್ ಮಾಡಲಾಗಿದೆ. ರಸ್ತೆ ಪಕ್ಕದ ಬಡಾವಣೆಯವರು ಶಾಸಕರ ಸಂಬಂಧಿಕರೊಬ್ಬರಿಗೆ 2 ಸೈಟ್ ನೀಡಿ ರಸ್ತೆ ಚಿಕ್ಕದಾಗುವಂತೆ ಮಾಡಿಸಿದ್ದಾರೆ. ಸೈಟ್ ನೀಡಿರುವ ದಾಖಲೆ ನನ್ನ ಹತ್ತಿರ ಇದೆ. ಕುಡಿಯುವ ನೀರಿನ ಯೋಜನೆಯಲ್ಲೂ ಹಣ ಲೂಟಿ ಹೊಡೆಯಲಾಗುತ್ತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಬಸವರಾಜ ಮುರಾಳ, ಸದಾಶಿವ ಮಾಗಿ, ಬಸಪ್ಪ ತಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಕಾರ್ಯದರ್ಶಿ ಸಂಜು ಬಾಗೇವಾಡಿ, ಮುಖಂಡರಾದ ಗೌರಮ್ಮ ಹುನಗುಂದ, ಸಂಗಮೇಶ ನಾಗೂರ, ನಾಗೇಶ ಕವಡಿಮಟ್ಟಿ, ವಿಜಯಕುಮಾರ ಬಡಿಗೇರ, ನರಸಮ್ಮ ಗುಬಚಿ, ಅಪ್ಪು ಧನ್ನೂರ ಇತರರಿದ್ದರು.