ಜಿಲ್ಲೆ

ಕುಡಿಯುವ ನೀರಿನ ಘಟಕಗಳಿಗಿಲ್ಲ ಕಾಯಕಲ್ಪ

*ಎಂಟರ ಪೈಕಿ ಮೂರು ಮಾತ್ರ ನಿರ್ವಹಣೆ

*ಶುದ್ಧ ಜೀವಜಲಕ್ಕೆ ತಪ್ಪದ ಪರದಾಟ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳು ಹದಗೆಟ್ಟಿದ್ದು, ಕೂಡಲೇ ಘಟಕಗಳನ್ನು ದುರಸ್ತಿಗೊಳಿಸಿ, ಶುದ್ಧ ನೀರು ಪೂರೈಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

5 ವರ್ಷಗಳ ಹಿಂದೆ ಗ್ರಾಪಂ ವ್ಯಾಪ್ತಿಯ ಕೂನಗಲ್, ಹುಣಸನಹಳ್ಳಿ, ತುಂಬೇನಹಳ್ಳಿ, ಅಚ್ಚಲು, ಕೆ.ಪಿ. ದೊಡ್ಡಿ, ಮೊಟ್ಟೇದೊಡ್ಡಿ, ದಾಸರಹಳ್ಳಿ, ದಾಸೇಗೌಡನದೊಡ್ಡಿ ಗ್ರಾಮದಲ್ಲಿ ವಿವಿಧ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.

ಎಂಟು ಘಟಕಗಳ ಪೈಕಿ ತುಂಬೇನಹಳ್ಳಿ, ಅಚ್ಚಲು ಮತ್ತು ಹುಣಸಹಳ್ಳಿಯ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ತುಂಬೇನಹಳ್ಳಿ ಘಟಕ ಸರಿ ಇದ್ದರೂ ನೀರು ಸರಿಯಿಲ್ಲ ಎಂದು ಅಲ್ಲಿನ ಜನರು ಘಟಕ ಬಳಸುತ್ತಿಲ್ಲ. ಐದು ಘಟಕಗಳು ಕೆಟ್ಟುನಿಂತು ಎರಡು ವರ್ಷವೇ ಆಗಿವೆ. ಘಟಕಗಳು ಕಾಲಕಾಲಕ್ಕೆ ನಿರ್ವಹಣೆ ಕಾಣದೆ ಯಂತ್ರಗಳು ಹಾಳಾಗಿವೆ. ಸ್ವಚ್ಛತೆ ಇಲ್ಲದೆ ನೀರಿನ ಟ್ಯಾಂಕ್‌ಗಳು ಮೂಲೆ ಸೇರಿವೆ. ಜತೆಗೆ ವಿದ್ಯುತ್ ಬಿಲ್ ಸರಿಯಾಗಿ ಪಾವತಿ ಮಾಡಿಲ್ಲ ಎನ್ನಲಾಗಿದೆ.

ಜಿಪಂ ಏಜೆನ್ಸಿ ಮೂಲಕ ಘಟಕಗಳನ್ನು ನಿರ್ವಹಣೆ ಮಾಡುತ್ತಿತ್ತು. ಆದರೆ, ಏಜೆನ್ಸಿಯವರು ಸೂಕ್ತ ನಿರ್ವಹಣೆ ಮಾಡದ ಪರಿಣಾಮ ಘಟಕಗಳು ಹಾಳಾಗಿ ಉಪಯೋಗಕ್ಕೆ ಬರದಂತಾಗಿವೆ. ಹಳೇ ಘಟಕಗಳನ್ನು ರಿಪೇರಿ ಮಾಡಿದರೂ ಒಂದೆರಡು ದಿನ ಚಾಲನೆಗೊಂಡು ಮತ್ತೆ ಯಥಾಪ್ರಕಾರ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಹೊಸ ಘಟಕ ಅಳವಡಿಸಿದರೆ ಮಾತ್ರ ಜನರಿಗೆ ಶುದ್ಧ ನೀರು ಸಿಗುತ್ತದೆ, ಇಲ್ಲದಿದ್ದರೆ ಬೋರ್‌ವೆಲ್ ನೀರೇ ಗತಿ ಎನ್ನುತ್ತಾರೆ ಕೆ.ಪಿ. ದೊಡ್ಡಿ ಪ್ರಕಾಶ್.

ಸಾರ್ವಜನಿಕರ ಒತ್ತಾಯ

ದಾಸರಹಳ್ಳಿ, ದಾಸೇಗೌಡನದೊಡ್ಡಿ, ಕೂನಗಲ್, ಜವಳಗೆರೆದೊಡ್ಡಿ, ಮೂಡ್ಲಳ್ಳಿದೊಡ್ಡಿ, ತಮ್ಮನಾಯ್ಕನಹಳ್ಳಿ ಕಾಲನಿ ಸೇರಿ ಅರ್ಕಾವತಿ ಮೇಲ್ಭಾಗದಲ್ಲಿ ಒಂದೇ ಒಂದು ಘಟಕ ಕಾರ್ಯ ನಿರ್ವಹಿಸುತ್ತಿಲ್ಲ. ನೀರು ಬೇಕೆಂದರೆ ಅಚ್ಚಲು, ಹುಣಸನಹಳ್ಳಿಗೆ 5 ರಿಂದ 6 ಕಿಮೀ ದೂರ ಬಂದು ನೀರು ತೆಗೆದುಕೊಂಡು ಹೋಗಬೇಕು. ಶುದ್ಧ ನೀರಿಗಾಗಿ ಊರೂರು ಅಲೆಯಬೇಕಿದೆ. ಜಿಪಂ ಕೂಡಲೇ ಹಳೇ ಘಟಕಗಳನ್ನು ತೆರವು ಮಾಡಿಸಿ ಹೊಸ ಘಟಕ ಮಾಡಿ ಜನರಿಗೆ ಶುದ್ಧ ನೀರು ಪೂರೈಕೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗ್ರಾಪಂ ಮೇಲೆ ಒತ್ತಡ

ಘಟಕಗಳನ್ನು ಗ್ರಾಪಂ ತನ್ನ ಸುಪರ್ದಿಗೆ ಪಡೆದಿಲ್ಲ. ಪ್ರಸ್ತುತ ಜನರಿಂದ ಶುದ್ಧ ನೀರಿಗೆ ಒತ್ತಡ ಬರುತ್ತಲೇ ಜಿಪಂ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಪ್ರಸ್ತುತ ಘಟಕಗಳನ್ನು ಸಣ್ಣಪುಟ್ಟ ರಿಪೇರಿ ಮಾಡಿಸಿ ಗ್ರಾಪಂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸುಪರ್ದಿಗೆ ನೀಡಲು ಮುಂದಾಗಿದೆ. ಘಟಕಗಳಲ್ಲಿ ನೀರಿನ ಟ್ಯಾಂಕ್, ನೀರು ಶುದ್ಧೀಕರಿಸುವ ಯಂತ್ರಗಳು ಸ್ವಚ್ಛತೆ ಇಲ್ಲದೆ ನಿರ್ವಹಣೆ ಕಾಣದೆ ಉಪಯೋಗಕ್ಕೆ ಬಾರದಂತೆ ಹಾಳಾಗಿವೆ.

ಗ್ರಾಪಂ ಕೆಟ್ಟುನಿಂತ ಘಟಕ ಸುಪರ್ದಿಗೆ ಪಡೆದರೆ ಗ್ರಾಪಂಗೆ ಆರ್ಥಿಕ ಹೊರೆ ಆಗುತ್ತದೆ. ವಿದ್ಯುತ್ ಬಿಲ್ ಬಾಕಿ ಸೇರಿ ಲಕ್ಷಾಂತರ ರೂಪಾಯಿ ಘಟಕ ನಿರ್ವಹಣೆಗೆ ಖರ್ಚಾಗುತ್ತದೆ. ಗ್ರಾಪಂನಲ್ಲಿ ಅಷ್ಟೊಂದು ಅನುದಾನ ಇಲ್ಲ, ಘಟಕ ಪಡೆದರೆ ಗ್ರಾಪಂ ಆರ್ಥಿಕ ನಷ್ಟದ ಹೊರೆ ಹೊರಬೇಕು. ಆದ್ದರಿಂದ ಹೊಸ ಘಟಕ ಜೋಡಣೆ ಮಾಡಿಕೊಡುವಂತೆ ಜಿಪಂಗೆ ಮೊರೆಹೋಗಲಾಗಿದೆ ಎಂದು ತಿಳಿದುಬಂದಿದೆ.

ಹೊಸ ಘಟಕಗಳನ್ನು ಗ್ರಾಪಂಗೆ ನೀಡುವ ಬದಲು ಏಜೆನ್ಸಿಗೆ ನೀಡಿ ನಿರ್ವಹಣೆ ವಿಫಲವಾದ ನಂತರ ಹಳೇ ಘಟಕಗಳನ್ನು ಗ್ರಾಪಂ ಸುಪರ್ದಿಗೆ ಪಡೆದುಕೊಳ್ಳಿ ಎಂದು ಜಿಪಂ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಜಿಪಂ ನೂತನ ಘಟಕಗಳ ನಿರ್ವಹಣೆಗೆ ಅನುದಾನ ಒದಗಿಸಿದರೆ ಮಾತ್ರ ಘಟಕಗಳನ್ನು ಗ್ರಾಪಂ ಸುಪರ್ದಿಗೆ ಪಡೆದು, ಕಾಲಕಾಲಕ್ಕೆ ಘಟಕ ನಿರ್ವಹಣೆ ಮಾಡುತ್ತಾ ಜನರಿಗೆ ಶುದ್ಧ ನೀರು ನೀಡಬಹುದು.ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ, ಹುಣಸನಹಳ್ಳಿ.ಗ್ರಾಪಂ ವ್ಯಾಪ್ತಿಯಲ್ಲಿ 9 ಸಾವಿರ ಜನಸಂಖ್ಯೆ ಇದ್ದು, ಇಷ್ಟೂ ಜನರಿಗೆ ಒಂದೆರಡು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಜಿಪಂ ಜನರಿಗೆ ಶುದ್ಧ ನೀರು ಕೊಡುವಲ್ಲಿ ವಿಫಲವಾಗಿದೆ. ಅಧಿಕಾರಿಗಳಲ್ಲಿ ಪ್ರಶ್ನೆ ಮಾಡಿದರೆ ಸಬೂಬು ಹೇಳುತ್ತಾರೆ. ರಿಪೇರಿ ಕಂಡ ಒಂದೆರಡು ದಿನಗಳಲ್ಲಿ ಮತ್ತೆ ಅದೇ ಸಮಸ್ಯೆ ಕಾಣುತ್ತವೆ. ಕೂಡಲೇ ಹೊಸ ಘಟಕ ಸ್ಥಾಪಿಸಿ ನಿರ್ವಹಣೆ ಹೊಣೆ ಗ್ರಾಪಂಗೆ ವಹಿಸಬೇಕು. ಮೋಹನ್, ಹುಣಸನಹಳ್ಳಿ