ಹನೂರು: ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಿಂದ ಭದ್ರಯ್ಯನಹಳ್ಳಿಗೆ ಭಾನುವಾರ ಕುಡಿಯುವ ನೀರನ್ನು ಪೂರೈಸುವುದರ ಮೂಲಕ ಗ್ರಾ.ಪಂ. ಆಡಳಿತ ಸಮಸ್ಯೆಯನ್ನು ಬಗೆಹರಿಸಿದೆ.
ಗ್ರಾಮದಲ್ಲಿ ಕಳೆದ 6 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರು. ಬಳಿಕ ಬೋರ್ ಕೊರೆಸಲಾಗಿತ್ತು. ಆದರೆ, ನೀರೆತ್ತುವ ವಿದ್ಯುತ್ ಮೋಟಾರ್ ಅಳವಡಿಸಿರಲಿಲ್ಲ. ಕಳೆದ 2 ತಿಂಗಳಿನಿಂದಲೂ ಇಲ್ಲಿನ ಜನರು ಮೋಟಾರ್ ಅಳವಡಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಪಿಡಿಒ ಅವರನ್ನು ವಿಚಾರಿಸಿದರೆ ಉಡಾಫೆ ಉತ್ತರವನ್ನು ನೀಡುತ್ತಿದ್ದರು. ಪರಿಣಾಮ ಇತ್ತೀಚೆಗೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಗಾಗಿ ಬಿಂದಿಗೆ ಹಿಡಿದು ಅಲೆಯುವಂತಾಗಿತ್ತು. ನೀರಿನ ಸಮಸ್ಯೆಯಿಂದಾಗಿ ಕೂಲಿ ಜನರು ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ಮಕ್ಕಳನ್ನು ಸರಿಯಾದ ಸಮಯಕ್ಕೆ ಶಾಲೆಗೆ ಕಳುಹಿಸಲು ತೊಂದರೆಯಾಗುತ್ತಿತ್ತು. ಇದರಿಂದ ಬೇಸತ್ತ ಗ್ರಾಮದ ಕರಿಯಪ್ಪಶೆಟ್ಟಿ, ಮಾದಶೆಟ್ಟಿ, ಮುನಿಶೆಟ್ಟಿ, ಸಿದ್ದರಾಮ, ಕುಮಾರಶೆಟ್ಟಿ, ಪುಷ್ಪಾ, ಯಶೋದಾ, ಪಾಪಮ್ಮ, ಲಕ್ಷ್ಮೀ ಹಾಗೂ ಇನ್ನಿತರರು ಖಾಲಿ ಬಿಂದಿಗೆಯನ್ನು ಹಿಡಿದು ಗ್ರಾಪಂ ಅಧಿಕಾರಿಗಳ ನಿರ್ಲಕ್ಷೃವನ್ನು ಖಂಡಿಸಿ ಶನಿವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ಬಗ್ಗೆ ಭಾನುವಾರದ ವಿಜಯವಾಣಿ ಸಂಚಿಕೆಯಲ್ಲಿ ನೀರಿಗಾಗಿ ಭದ್ರಯ್ಯನಹಳ್ಳಿಯಲ್ಲಿ ಪ್ರತಿಭಟನೆ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತ ತಾಲೂಕು ಪಂಚಾಯಿತಿ ಇಒ ಉಮೇಶ್ ಅವರು ಅಗತ್ಯ ಕ್ರಮಕೈಗೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಪಿಡಿಒ ವೈರಮಾಣಿಕ್ಯಂ ಅವರಿಗೆ ಸೂಚಿಸಿದ್ದರು. ಭಾನುವಾರ ಸ್ಥಳಕ್ಕಾಗಮಿಸಿದ ಪಿಡಿಒ ಮೋಟಾರ್ ಅಳವಡಿಸುವ ಕಾರ್ಯ ಮಾಡಿಸಿದರು. ಬಳಿಕ ಜಲಜೀವನ್ ಮಿಷನ್ ಯೋಜನೆಯಡಿ ಅಳವಡಿಸಿರುವ ನಲ್ಲಿಗಳಿಗೆ ನೀರು ಪೂರೈಕೆ ಮಾಡಲಾಯಿತು. ಇದರಿಂದ ಕಳೆದ 2 ತಿಂಗಳಿನಿಂದಲೂ ಕುಡಿಯುವ ನೀರಿಗೆ ಸಮಸ್ಯೆಯನ್ನು ಎದುರಿಸುತ್ತಿದ್ದ ಜನರು ನಿಟ್ಟುಸಿರು ಬಿಟ್ಟಂತಾಯಿತು.