ಜಿಲ್ಲೆ

ಜನರಿಗೆ ನೀರು ಕೊಡಲಾಗದಿದ್ದರೆ ನಾವ್ಯಾಕೆ ಅಧಿಕಾರದಲ್ಲಿರಬೇಕು?

Vijayanagara - Veerendra

ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗೆ ಸಚಿವ ಜಮೀರ್ ಕ್ಲಾಸ್

ಹೊಸಪೇಟೆ: ಕುಡಿಯುವ ನೀರಿನ ವಿಚಾರದಲ್ಲಿ ಚೆಲ್ಲಾಟ ಆಡಬೇಡಿ. ಜನರಿಗೆ ಕುಡಿಯಲು ನೀರು ಒದಗಿಸಲು ಸಾಧ್ಯವಾಗದಿದ್ದರೆ, ನಾವು- ನೀವು ಯಾಕೆ ಅಧಿಕಾರದಲ್ಲಿ ಯಾಕೆ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಾಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ತ್ರೆöÊಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬಗ್ಗೆ ಗಹನವಾಗಿ ಚರ್ಚೆ ನಡೆಸಿದರು.

ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಯಾವುದೇ ತಾಲೂಕಿನಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಜರುಗಿಸಬೇಕು. ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಮೇಲ್ಮಟ್ಟದ ಜಲಾಗಾರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಗತ್ಯವಿದ್ದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಬೇಕು. ಇಲ್ಲವೇ ಬೋರ್ ವೆಲ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಇದಕ್ಕೂ ಮುನ್ನಶಾಸಕಿ ಎಂ.ಪಿ.ಲತಾ ಮಾತನಾಡಿ, ಮುರಪನಹಳ್ಳಿ ತಾಲೂಕಿನ ೧೦೮ ಗ್ರಾಮಗಳು ನೀರಿನ ಅಭಾವ ಎದುರಿಸುತ್ತಿವೆ. ಆ ಪೈಕಿ ಇಟ್ಟಗುಡಿ ಮತ್ತು ಹೊನ್ನೇನಹಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ತೀರವಾಗಿದೆ. ಬೆಳಗ್ಗೆ ಕೊಡಗಳಲ್ಲಿ ತುಂಬಿದ ನೀರು ರಾತ್ರಿ ವೇಳೆಗೆ ಪಾಚಿಗಟ್ಟುತ್ತಿದೆ. ವರ್ಷ ಕಳೆದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಜನರು ಸಂಬAಧಿಸಿ ಇಲಾಖೆಗೆ ದೂರಿದರೂ, ಅಧಿಕಾರಿಗಳು ಸ್ಪಂದಿಸಲ್ಲ ಎಂದು ಸಭೆಗೆ ದೂರಿದರು.

ಇದು ನನ್ನ ಗಮನಕ್ಕಿಲ್ಲವೆಂಬ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಯ ಉತ್ತರದಿಂದ ಕೆರಳಿದ ಸಚಿವ ಜಮೀರ್ ಅಹ್ಮದ್ ಖಾನ್, ವರ್ಷದಿಂದ ಸಮಸ್ಯೆ ಇದೆ ಎನ್ನುವುದಾದರೆ, ಅಧಿಕಾರಿಗಳ ಕೆಲಸವೇನು? ನಾಲ್ಕು ತಿಂಗಳ ಹಿಂದೆ ಶಾಸಕರಾದವರಿಗೆ ಗಮನಕ್ಕೆ ಬಂದಿದೆ. ವರ್ಷಗಳಿಂದ ಕೆಲಸ ಮಾಡುವ ಅಧಿಕಾರಿಗಳ ಗಮನಕ್ಕೇಕೆ ಬರಲಿಲ್ಲ? ಇಂದು ಸಂಜೆ ವೇಳೆಗೆ ಈ ಬಗ್ಗೆ ಜಿ.ಪಂ. ಸಿಇಒಗೆ ವರದಿ ಸಲ್ಲಿಸಬೇಕು. ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.

ಹಡಗಲಿ ಶಾಸಕ ಕೃಷ್ಣಾ ನಾಯ್ಕ ಮಾತನಾಡಿ, ತುಂಗಭದ್ರಾ ನದಿ ಭಾಗದ ಹಳ್ಳಿಗಳಲ್ಲಿ ನೀರಿನ ಸೌಕರ್ಯವಿಲ್ಲ. ಜನರು ಸವಳು ನೀರು ಕುಡಿಯುತ್ತಿದ್ದಾರೆ. ಜೆಜೆಎಂ ಕಾಮಗಾರಿ ೪ನೇ ಹಂತಕ್ಕೆ ತಲುಪಿದ್ದರೂ, ಒಂದೇ ಒಂದು ಗ್ರಾಮಕ್ಕೆ ನದಿ ನೀರು ಪೂರೈಕೆಯಾಗುತ್ತಿಲ್ಲ. ನೀರೆತ್ತುವ ಪಂಪ್‌ಗಳ ದ್ದೇ ಸಮಸ್ಯೆ ಎಂದು ಎರಡು ಇಲಾಖೆಗಳು ಪರಸ್ಪರ ಬೊಟ್ಟು ಮಾಡುತ್ತಿವೆ. ತಾಲೂಕಿನಲ್ಲಿ ಬಹುತೇಕ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಮಾತನಾಡಿ, ಮಳೆ ಕೊರತೆಯಾಗಿದ್ದರಿಂದ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಕೆಲ ಗ್ರಾಮಗಳಲ್ಲಿ ಸಮಸ್ತೆ ಕಾಣಿಸಿಕೊಳ್ಳುತ್ತಿದೆ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು.

ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ದಶಕದ ಹಿಂದೆ ರೂಪಿಸಿದ್ದ ಹೊಸಪೇಟೆಗೆ ನಿರಂತರ ನೀರು ಕಲ್ಪಿಸುವ ಯೋಜನೆ ಈಗ ಔಟ್‌ಡೇಟೆಡ್. ಈಗಿನ ಜನ ಸಂಖ್ಯೆಗೆ ಅದು ಸಾಲುತ್ತಿಲ್ಲ. ಎಚ್‌ಎಲ್‌ಸಿ, ಎಲ್‌ಎಲ್‌ಸಿಯನ್ನು ಅವಂಬಿಸಿರುವ ಹಲವು ಹಳ್ಳಿಗಳಿಗೆ ಡಿಸೆಂಬರ್‌ನಿAದ ತೀವ್ರ ತೊಂದರೆಯಾಗಲಿದೆ. ಕಾರಿಗನೂರು, ಪಿ.ಕೆ.ಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ತುಂಗಭದ್ರಾ ಡ್ಯಾಂ ಮೂಲಕ ಜೆ.ಜೆ.ಎಂ ಜಾರಿಗೊಳಿಸಬೇಕು ಎಂದು ಗಮನ ಸೆಳೆದರು.
ಈ ಹಿಂದಿನ ಸಭೆಯಲ್ಲಿ ಹೊಸಪೇಟೆ ನಗರಸಭೆ ವ್ಯಾಪ್ತಿಯ ೧೭ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಸೂಚಿಸಲಾಗಿತ್ತು. ಆದರೆ, ಇಂದಿಗೂ ಸಮಸ್ಯೆ ಬಗೆಹರಿಸಿಲ್ಲ. ೩೧ನೇ ವಾರ್ಡ್ ಜನರು ನಿನ್ನೆಯೂ ನನ್ನ ಬಳಿ ಬಂದು ಅಳಲು ತೋಡಿಕೊಂಡರು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ನಗರಸಭೆ ಅಧಿಕಾರಿಗಳನ್ನು ಕ್ಲಾಸ್ ತೆಗೆದುಕೊಂಡರು.
ಬಳಿಕ ವಿವಿಧ ಇಲಾಖೆಗಳ ವಸತಿ ನಿಲಯಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ರಾಜ್ಯದಲ್ಲೇ ಗರಿಷ್ಟ ಬೆಳೆ ಹಾನಿ
ಜಿಲ್ಲೆಯಲ್ಲಿ ಈ ಬಾರಿ ಶೇ.೩೬ರಷ್ಟು ಮಳೆ ಕೊರತೆಯಾಗಿದ್ದು, ಹೊಸಪೇಟೆಯಲ್ಲಿ ಅತಿ ಹೆಚ್ಚು ಶೇ.೫೭ ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಾದ್ಯಂತ ಆಗಸ್ಟ್ನಲ್ಲಿ ಮಳೆಯಾಗದ ಕಾರಣ ಒಟ್ಟು ೨.೭೩ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ವಿಜಯನಗರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬೆಳೆ ನಷ್ಟ ಉಂಟಾಗಿದ್ದು, ಕೇಂದ್ರ ಬರ ಅಧ್ಯಯನ ತಂಡವೂ ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಾಹಿತಿ ನೀಡಲು ಅಧ್ಯಯನ ಮಾರ್ಗದ ವಿವರವನ್ನು ಸಿದ್ದಪಡಿಸಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಸಭೆಗೆ ಮಾಹಿತಿ ನೀಡಿದರು.

ಸಕಾಲದಲ್ಲಿ ಮುಗಿಸಿದರೆ ಕೈಮುಗಿಯುವೆ
ಪಾವಗಡ ಕುಡಿಯುವ ನೀರು ಯೋಜನೆ ಪ್ರಗತಿ ಪರಿಶೀಲನೆ ವೇಳೆ ಮಧ್ಯ ಪ್ರವೇಶಿಸಿ ಸಂಸದ ದೇವೇಂದ್ರಪ್ಪ, ಈ ವರ್ಷವಲ್ಲ ಮುಂದಿನ ವರ್ಷದ ಡಿಸೆಂಬರ್‌ಗೆ ಕಾಮಗಾರಿ ಪೂರ್ಣಗೊಳಿಸಿದರೂ ಅಧಿಕಾರಿಗಳಿಗೆ ಕೈಮುಗಿದು ಅಭಿನಂದಿಸುವೆ. ೨೨೦೦ ಕೋಟಿ ರೂ. ಮೊತ್ತದಲ್ಲಿ ೨೦೧೭ರಲ್ಲಿ ಕಾಮಗಾರಿ ಆರಂಭಗೊAಡಿದ್ದರೂ, ನಿರೀಕ್ಷಿತ ವೇಗ ಪಡೆದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಕನಸಿನ ಕೂಸು. ಇತ್ತೀಚೆಗೆ ಕಾಮಗಾರಿ ಚುರುಕು ಪಡೆಯುತ್ತಿದೆ. ಆದಷ್ಟು ಮೊದಲ ಹಂತದ ಕಾಮಗಾರಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಜಾಕ್‌ವೆಲ್ ನಿರ್ಮಾಣ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಪೂರೈಸಿ ನೀರೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.

ಶಾಲಾ ಕೊಠಡಿಗಳ ದುರಸ್ತಿಗೆ ಆದ್ಯತೆ:
ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿನ ಅನೇಕ ಕೊಠಡಿಗಳು ದುರಸ್ಥಿಯಿಂದ ಸೋರುತ್ತಿದ್ದು ಇವುಗಳ ರಿಪೇರಿ ಬಹಳ ಪ್ರಮುಖವಾಗಿದೆ. ಈ ವರ್ಷದ ಡಿಎಂಎಫ್ ನಿಧಿಯಡಿ ಜಿಲ್ಲೆಯಲ್ಲಿನ ಎಲ್ಲಾ ಶಾಲೆಗಳ ಕೊಠಡಿ ದುರಸ್ಥಿ ಮಾಡಿಸಲು ಉದ್ದೇಶಿಸಲಾಗಿದೆ. ಮಕ್ಕಳ ಶಿಕ್ಷಣ ಬಹಳ ಪ್ರಮುಖವಾಗಿದ್ದು ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಅದಕ್ಕೆ ಎಲ್ಲಾ ಶಾಸಕರು ಸಹಕಾರ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್ಗೆ ಸೀರಿಸಿ:
ಹೊಸಪೇಟೆಯ ಸರ್ಕಾರಿ ೧೦೦ ಬೆಡ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರವನ್ನು ಸರಿಯಾಗಿ ನಿರ್ವಗಿಸದ, ಆರ್‌ಒ ಪ್ಲಾಂಟ್, ನಿಗದಿತ ಅವಧಿಯಲ್ಲಿ ರಸ್ತೆ ಕಾಮಗಾರಿಗಳನ್ನು ನಿರ್ವಹಿಸದ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ಗೆ ಸೇರ್ಪಡೆಗೊಳಿಸುವಂತೆ ಸಚಿವ ಜಮೀರ್ ಅಹ್ಮದ್ ಖಾನ್ ಜಿಲ್ಲಾಧಿಕಾರಿಗೆ ನಿರ್ದೇಶಿಸಿದರು.

ತಾಲೂಕು ಮಟ್ಟದಲ್ಲಿ ಡಿಡಿಎಲ್‌ಆರ್ ಡ್ರೈವ್
ಹಡಗಲಿ ಭಾಗದ ರೈತರು ಎದುರಿಸುತ್ತಿರುವ ಜಮೀನುಗಳ ಪೋಡಿ, ಮೂಲ ದಾಖಲೆಗಳು ಲಭಿಸದೇ ಸಮಸ್ಯೆ ಎದುರಿಸುವಂತಾಗಿದೆ. ಬ್ಯಾಂಕ್ ಸಾಲ, ಮಾರಾಟ ಹಾಗೂ ಸಹೋದರರು ಆಸ್ತಿ ಹಂಚಿಕೊಳ್ಳಲು ಸಮಸ್ಯೆಯಾಗುತ್ತಿದೆ. ಈ ವ್ಯಾಜ್ಯ ಬಗೆಹರಿಸಿಕೊಳ್ಳಲು ಡಿಡಿಎಲ್‌ಆರ್ ಕಚೇರಿಗೆ ಅಲೆಯುವಂತಾಗಿದೆ. ಅದರ ಬದಲಾಗಿ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರು ಪ್ರತಿ ತಾಲೂಕಿನಲ್ಲಿ ಮಾಸಿಕ ವಿಚಾರಣೆ ನಡೆಸಿ, ಬಗೆಹರಿಸಬೇಕು ಎಂಬ ಶಾಸಕ ಕೃಷ್ಣಾ ನಾಯ್ಕ ಸಲಹೆಗೆ ಸಮ್ಮತಿಸಿದ ಸಚಿವರು, ಅಧಿಕಾರಿಗೆ ಆದೇಶಿಸಿದರು.

ಶಾಲೆ, ಬಸ್ ನಿಲ್ದಾಣ ಪಕ್ಕದಲ್ಲೇ ವೈನ್ ಶಾಪ್!
ಹೊಸಪೇಟೆ ಹೊರವಲಯದ ಕಾರಿಗನೂರಿನಲ್ಲಿ ಬಸ್ ನಿಲ್ದಾಣ ಹಾಗೂ ಸರ್ಕಾರಿ ಶಾಲಾ ಪಕ್ಕದಲ್ಲೇ ವೈನ್ ಶಾಪ್‌ಗೆ ಅನುಮತಿ ನೀಡಿದ್ದು ಹೇಗೆ ಎಂದು ಸಚಿವರು ಅಬಕಾರಿ ಅಧಿಕಾರಿಯನ್ನು ಖಾರವಾಗಿ ಪ್ರಶ್ನಿಸಿದರು. ವೈನ್ಸ್ನಿಂದ ಸಮಸ್ಯೆಯಾಗುತ್ತಿದೆ ಎಂದು ಮಹಿಳೆಯರು ನಿನ್ನೆ ಗೋಳು ತೋಡಿಕೊಂಡರು. ಈ ಬಗ್ಗೆ ಪರಿಶೀಲಿಸಿ, ಕ್ರಮ ಜರುಗಿಸಲು ಅಬಕಾರಿ ಅಧಿಕಾರಿಗೆ ಆದೇಶಿಸಿದರು.

ಸಭೆಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್, ಕೃಷ್ಣನಾಯ್ಕ ಎಲ್., ಎಂ.ಪಿ.ಲತಾ ಮಲ್ಲಿಕಾರ್ಜುನ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಎಂ.ಎಸ್., ಜಿ.ಪಂ. ಸಿಇಒ ಸದಾಶಿವ ಪ್ರಭು ಬಿ., ಎಸ್ಪಿ ಶ್ರೀಹರಿ ಬಾಬು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಬಾರಿ ತೀವ್ರ ಬರಗಾಲ ಆವರಿಸಿದೆ. ಹೀಗಾಗಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪ್ರತಿ ಜಮೀನಿಗೆ ತೆರಳಿ ಸಮೀಕ್ಷೆ ನಡೆಸಬೇಕು. ಬರಗಾಲದ ನೆಪದಲ್ಲಿ ಎಸಿ ಕಚೇರಿಯಲ್ಲಿ ಕುಳಿತು ಬೇಕಾಬಿಟ್ಟಿಯಾಗಿ ಟೇಬಲ್ ವರ್ಕ್ ಮಾಡಿ ರೈತರಿಗೆ ಅನ್ಯಾಯ ಮಾಡಬೇಡಿ. ಅದನ್ನು ನಾವು ಸಹಿಸುವುದೂ ಇಲ್ಲ. -ವೈದೇವೇಂದ್ರಪ್ಪ, ಸಂಸದ