ಮದ್ದೂರು: 80 ಕೋಟಿ ರೂ. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಕುಡಿಯುವ ನೀರು ಒದಗಿಸುವ ಯೋಜನೆ ವರ್ಷದ ಅಂತ್ಯಕ್ಕೆ ಮುಗಿಯಲಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ತಾಲೂಕಿನ ತೊಪ್ಪನಹಳ್ಳಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಈ ಯೋಜನೆಯಿಂದ ಈ ಭಾಗದ 18 ಕೆರೆಗಳಿಗೆ ನೀರು ತುಂಬುತ್ತದೆ. ಜತೆಗೆ 40 ಹಳ್ಳಿಗಳ ಗ್ರಾಮಸ್ಥರಿಗೆ ಕುಡಿಯುವ ನೀರು, ವ್ಯವಸಾಯಕ್ಕೆ ಅನುಕೂಲವಾಗುತ್ತದೆ ಮತ್ತು ಅಂತರ್ಜಲ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಬನ್ನಹಳ್ಳಿ ಏತನೀರಾವರಿಯಿಂದ ತೊಪ್ಪನಹಳ್ಳಿಯ ವರೆಗೆ 8 ಕಿ.ಮೀ. ವರೆಗೆ ಪೈಪ್‌ಲೈನ್ ಮಾಡಲಾಗಿದೆ ಹಾಗೂ ಇನ್ನೂ 8 ಕಿ.ಮೀ. ವರೆಗೆ ಕಾಮಗಾರಿ ನಡೆಯಬೇಕಿದೆ. ಈಗಾಗಲೇ ಪೈಪ್‌ಲೈನ್ ಕಾರ್ಯ ಮುಗಿಯಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆಯಿಂದ ಕಲಸ ವಿಳಂಭವಾಯಿತು. ಡಿಸೆಂಬರ್ ವೇಳೆಗೆ ಸಂಪೂರ್ಣ ಕಾಮಗಾರಿ ಮುಗಿದು ಗ್ರಾಮಸ್ಥರು ಮತ್ತು ರೈತರಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕೂಳಗೆರೆ ಶೇಖರ್ ಹಾಗೂ ಅಧಿಕಾರಿಗಳು ಇದ್ದರು.