ತುಮಕೂರು: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆನ್‌ಲೈನ್ ಮೂಲಕ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕ್ಕೆ ಸೂಚಿಸಿದರು. ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸುವ ಮುಂಚೆ ಭೂವಿಜ್ಞಾನಿಗಳ ಮೂಲಕ ನೀರಿನ ಪಾಯಿಂಟ್ ಗುರುತಿಸಿ, ಕೊಳವೆ ಬಾವಿ ಕೊರೆಸಿ ಜನರಿಗೆ ನೀರು ಪೂರೈಸುವಂತೆ ತಹಸೀಲ್ದಾರ್, ಇಒ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ 5 ಎಕರೆ ಜಮೀನು ಆಶ್ರಯ ಯೋಜನೆಗೆ ಗುರುತಿಸಿ ಪ್ರಸ್ತಾವನೆ ಕಳುಹಿಸಿಕೊಡುವಂತೆ ತಹಸೀಲ್ದಾರ್‌ಗೆ ನಿದೇಶಿಸಿದರು. ಎಲ್ಲ ಸರ್ಕಾರಿ ಶಾಲೆಗಳ ಭೂಮಿಯ ದಾಖಲೆಗಳನ್ನು ಪಡೆದು ಖಾತೆಗಳನ್ನು ಮಾಡಿಕೊಡುವ ಸಂಬಂಧ ತಹಸೀಲ್ದಾರ್ ಮತ್ತು ಬಿಇಒಗಳು ತಡ ಮಾಡದೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸಲು ಅಂತರ್ಜಲ ಲಭ್ಯವಿಲ್ಲದಿದ್ದಲ್ಲಿ ಪಕ್ಕದ ಗ್ರಾಮಗಳಲ್ಲಿ ಅಂತರ್ಜಲ ಮೂಲ ಗುರುತಿಸಿ ಪೈಪ್‌ಲೈನ್ ಹಾಕಿಸಿ ನೀರು ಪೂರೈಸಬೇಕು ಎಂದರು.
ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಕ್ರಿಯಾಯೋಜನೆಯನ್ನು ತಯಾರಿಸುವ ಮೂಲಕ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ತಕ್ಷಣವೇ ಶಾಸಕರ ನೇತೃತ್ವದ ಟಾಸ್ಕ್ ಪೋರ್ಸ್ ಸಮಿತಿ ಸಭೆ ಕರೆದು ಖಾಸಗಿ ಕೊಳವೆ ಬಾವಿ ಜಲಮೂಲಗಳು ಇರುವ ಕಡೆ ಸರ್ಕಾರದ ವತಿಯಿಂದ ಖಾಯಂ ಕೊಳವೆಬಾವಿ ಕೊರೆಸಬೇಕು ಎಂದರು.