ಬೆಳಗಾವಿ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್ ಮಾತನಾಡಿದರು. ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ.ರಾಜೇಂದ್ರ ಉಪಸ್ಥಿತರಿದ್ದರು. 
ಜಿಲ್ಲೆ

ಕುಡಿಯುವ ನೀರಿನ ಸಮಸ್ಯೆ ನಿರ್ಲಕ್ಷಿಸಿದರೆ ಕ್ರಮ

ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪಿಡಿಒಗಳು ಮುಂಜಾಗ್ರತೆ ವಹಿಸಬೇಕು. ನಿರ್ಲಕ್ಷೃ ವಹಿಸಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಎಲ್.ಅತೀಕ್ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಈಗಾಗಲೇ ಜಿಲ್ಲೆಯ 12 ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಪಂಗಳಲ್ಲಿ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದರು.

ಬೇಸಿಗೆ ಆರಂಭಗೊಂಡಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಿಡಿಒಗಳು ನೀರಿನ ಸಮಸ್ಯೆಯಾಗದಂತೆ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಿದ್ಧತೆ
ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ನದಿಗಳಿಂದ ನೀರು ಪೂರೈಕೆ ಮಾಡುತ್ತಿದ್ದರೆ ಅಲ್ಲಿನ ಸ್ಥಿತಿಗತಿ ಬಗ್ಗೆ ನಿಗಾವಹಿಸಬೇಕು.

ಬೋರ್‌ವೆಲ್ ಅವಶ್ಯಕತೆಯಿರುವ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಈ ವಿಷಯದಲ್ಲಿ ತಪ್ಪು ಮಾಹಿತಿ ನೀಡಿದರೆ ಅಥವಾ ನಿರ್ಲಕ್ಷೃ ವಹಿಸಿರುವ ಕುರಿತು ಜನಪ್ರತಿನಿಧಿಗಳು, ಸಾರ್ವಜನಿಕರಿಂದ ದೂರು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿ ಜನರು ವಿವಿಧ ರೀತಿಯ ಸಮಸ್ಯೆ ಎದುರಿಸುವಂತಾಗಿದೆ. ಅದಕ್ಕೆ ಸಂಬಂಧಿಸಿದಂತೆ ಮನೆ, ಬೆಳೆಹಾನಿ ಪರಿಹಾರ ಸಮರ್ಪಕವಾಗಿ ನಡೆಯಬೇಕು.

ಈಗಾಗಲೇ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಕೆಲಸ ಪ್ರಥಮ ಹಂತದಲ್ಲಿ ಮುಗಿದಿದ್ದು, ಶೀಘ್ರ ಎರಡನೇ ಹಂತ ಆರಂಭಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ.ರಾಜೇಂದ್ರ ಸೇರಿ ಅಧಿಕಾರಿಗಳು ಇದ್ದರು.

ಶಾಲೆಯಲ್ಲಿ ಶೌಚಗೃಹ ಕಡ್ಡಾಯ

ಜಿಲ್ಲೆಯ ಪ್ರತಿ ಸರ್ಕಾರಿ ಶಾಲೆ ಶೌಚಗೃಹ ಸೌಲಭ್ಯ ಹೊಂದಿರಬೇಕು. ಅವಶ್ಯವಿದ್ದಲ್ಲಿ ಸ್ಥಳೀಯ ಗ್ರಾಪಂನಿಂದ ನಿರ್ಮಾಣ ಮಾಡಿಕೊಡಬೇಕು. ಕಾಂಪೌಂಡ್ ಇಲ್ಲದಿರುವ ಶಾಲೆಗಳಿಗೆ ತಕ್ಷಣ ಕಾಂಪೌಂಡ್ ನಿರ್ಮಿಸುವ ಕೆಲಸ ಆರಂಭಿಸಬೇಕು. ಪ್ರತಿ ಶಾಲೆಯಲ್ಲಿ ಕಿಚನ್ ಗಾರ್ಡನ್ ನಿರ್ಮಾಣ ಮಾಡಬೇಕು. ಅದರಲ್ಲಿ ಹೊಂಗೆ, ಹುಣಸೆ, ನಿಂಬೆ ಸಸಿ ಬೆಳೆಸಬೇಕು. ಜತೆಗೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.