ಜಿಲ್ಲೆ

ಮಳೆ ಇಲ್ಲದೆ ಕುಡಿವ ನೀರಿಗೆ ತತ್ವಾರ

reportermys

ಮಡಿಕೇರಿ: ಕೊಡಗಿನ ಕೆಲವು ಪ್ರದೇಶಗಳು ಹೊರತುಪಡಿಸಿದರೆ ಉಳಿದೆಡೆ ಮಳೆ ದೂರವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ ಈ ವರ್ಷ ಇನ್ನು ಕೂಡ ಒಂದು ಉತ್ತಮವಾದ ಮಳೆ ಸುರಿದಿಲ್ಲ. ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ಸುತ್ತಮುತ್ತಲ ಪ್ರದೇಶ, ನಾಪೋಕ್ಲು ವ್ಯಾಪ್ತಿಯಲ್ಲಿ ಒಂದಿಷ್ಟು ಮಳೆ ಆಗಿದೆ. ಈ ಬೆನ್ನಲ್ಲೇ ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ.


ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆ ಬಹುತೇಕ ಬರಿದಾಗಿದೆ. ಕುಡಿಯುವ ನೀರಿಗಾಗಿ ಕಾವೇರಿಯನ್ನೇ ಅವಲಂಬಿಸಿರುವ ಕುಶಾಲನಗರ ಸೇರಿದಂತೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಕೊರತೆಯ ಬಿಸಿ ಕಾಣಿಸಿಕೊಳ್ಳಲಾರಂಭಿಸಿದೆ. ಮಡಿಕೇರಿಯಲ್ಲೂ ನಗರಕ್ಕೆ ಕುಡಿಯುವ ನೀರು ಸರಬರಾಜು ಕಳೆದ ಎರಡು ದಿನಗಳಿಂದ ಕಡಿಮೆಯಾಗಿದೆ.


ಕೂಟುಹೊಳೆ, ರೋಷನಾರ ಕೆರೆ, ಕನ್ನಂಡಬಾಣೆ ಹಾಗೂ ಕುಂಡಾಮೇಸ್ತ್ರಿಯಿಂದ ನೀರು ಸರಬರಾಜಾಗುತ್ತಿದ್ದು, ಬಿಸಿಲಿನ ತಾಪ ಹಾಗೂ ಮಳೆ ಬಾರದ ಪರಿಣಾಮ ರೋಷನಾರ ಕೆರೆ ಮತ್ತು ಕೂಟುಹೊಳೆಯಲ್ಲಿ ನೀರು ಬತ್ತಿ ಹೋಗಿದೆ. ಇದರಿಂದಾಗಿ ನೀರಿನ ಅಭಾವ ಉಂಟಾಗಿದೆ. ಹಾಗಾಗಿ ನಗರಕ್ಕೆ ಈಗ ೨ ದಿನಕ್ಕೊಮ್ಮೆ ಕುಡುಯುವ ನೀರು ಪೂರೈಸಲಾಗುತ್ತುದೆ.


ಮಾರ್ಚ್ ಅಂತ್ಯದಲ್ಲಿ ಜಿಲ್ಲೆಯಲ್ಲಿ ೩೪ ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಏಪ್ರಿಲ್‌ನಲ್ಲೂ ಬಹುತೇಕ ಇದೇ ಸ್ಥಿತಿ ಮುಂದುವರಿದಿದೆ. ಸದ್ಯದಲ್ಲಿ ಮಳೆ ಬಾರದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ.

ಮಳೆ ಬಾರದಿರುವುದರಿಂದ ಕೊಡಗಿನಲ್ಲಿ ಜಲಮೂಲಗಳು ಬರಿದಾಗುತ್ತಿದೆ. ಕಾವೇರಿ ಸೇರಿ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಕ್ಷೀಣವಾಗಿದೆ. ಮಡಿಕೇರಿ ಮತ್ತು ಪ್ರಮುಖ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಪ್ರಕೃತಿ ವಿಕೋಪ, ಮರಗಿಡಗಳನ್ನು ಕಡಿಯುವುದರಿಂದ ಮಳೆ ಕಡಿಮೆಯಾಗುತ್ತಿದೆ. ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು .ಇದೆ ರೀತಿ ಪರಿಸರ ನಾಶ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗುತ್ತದೆ. ಈಗಲೆ ಎಚ್ಚೆತ್ತುಕೊಳ್ಳಬೇಕಾಗಿದೆ.
-ಮಹಾಂತ ಸ್ವಾಮೀಜಿ, ಕಲ್ಲುಮಠ, ಕೊಡ್ಲಿಪೇಟೆ

ಮನುಷ್ಯನ ಅತಿ ಆಸೆಯ ಕಾರಣ ಹೆಚ್ಚಾಗುತ್ತಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳಂತವುಗಳ ಕಾರಣದಿಂದಾಗಿ ನೀರಿನ ಮೂಲಗಳನ್ನು ಕಡೆಗಣಿಸಲಾಗುತ್ತಿರುವುದು ಒಂದು ಕಾರಣವಾದರೆ. ನೀರಿನ ಒರತೆಗಳಲ್ಲಿ ನೀರಿನ ಶೇಖರಣೆ ಮಾಡುವತ್ತ ಗಮನಹರಿಸದೆ ನಿರ್ಲಕ್ಷ್ಯ ತೋರಿಸುತ್ತಿರುವುದು ಮತ್ತೊಂದು ಕಾರಣವಾಗಿದೆ. ಬೇರೆ ಜಿಲ್ಲೆಗಳಿಗೆ ನೀರನ್ನು ನೀಡುತ್ತಿರುವ ಕರ್ನಾಟಕದ ಗಂಗೆ ಕಾವೇರಿ ನಾಡಿನ ಜನರಿಗೆ ನೀರಿನ ಅಭಾವ ಉಂಟಾಗುತ್ತಿರುವುದು ದುರಂತವೇ ಸರಿ.
-ಡಿ.ಸುಜಲಾದೇವಿ, ಪ್ರಾಂಶುಪಾಲರು, ಸುಪ್ರಜ ಗುರುಕುಲ ವಿದ್ಯಾಸಂಸ್ಥೆ, ಶನಿವಾರಸಂತೆ

ಬಿಸಿಲ ಧಗೆ ಜಾಸ್ತಿಯಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ. ಜಲಜೀವನ್ ಯೋಜನೆಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಹಣವನ್ನು ಬಿಡುಗಡೆಗೊಳಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾದಲ್ಲಿ ಕೂಡಲೆ ಕ್ರಮಕೈಗೊಳ್ಳಲು ಪಿಡಿಒಗಳಿಗೆ ತಿಳಿಸಲಾಗಿದೆ.
-ಬಿ.ವಿ.ಜಯಣ್ಣ, ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯಿತಿ, ಸೋಮವಾರಪೇಟೆ.

ಗ್ರಾಮೀಣ ಭಾಗದಲ್ಲಿ ಕೆರೆ ಕೊಳ್ಳಗಳು ಬತ್ತುತ್ತಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು. ಗ್ರಾಮ ಪಂಚಾಯಿತಿಗಳು ಎಚ್ಚರ ವಹಿಸಬೇಕು. ಬಿಸಿಲ ಧಗೆ ಹಾಗು ಮಳೆ ಬೀಳದಿರುವುದರಿಂದ ಬರಗಾಲದ ಆತಂಕ ರೈತಾಪಿ ವರ್ಗದಲ್ಲಿದೆ. ಚುನಾವಣೆಯ ಜವಾಬ್ದಾರಿಯಿದ್ದರೂ ಜಿಲ್ಲಾಡಳಿತ ರೈತರ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಬೇಕು.
-ಸಿ.ಬಿ.ಸುರೇಶ್ ಶೆಟ್ಟಿ, ಸದಸ್ಯರು, ಚೌಡ್ಲು ಗ್ರಾಮ ಪಂಚಾಯಿತಿ.

ವಿದ್ಯಾವಂತರು, ಬುದ್ಧಿವಂತರೇ ನದಿಗಳಿಗೆ ತ್ಯಾಜ್ಯ ಬಿಡುತ್ತಿದ್ದಾರೆ. ಅದರಿಂದ ಸಾಕಷ್ಟು ಜಲಚರಗಳು ನಾಶವಾಗಿವೆ. ನದಿಗೂ ಹಾನಿಯಾಗುತ್ತಿದೆ. ಸರ್ಕಾರ ಪ್ರತಿವರ್ಷ ಈ ತರಹದ ದುಸ್ಥಿತಿ ಬಾರದ ಹಾಗೆ ಕೆಲವು ಕಠಿಣ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ.
-ಮುಕುಂದ ಎನ್. ಶ್ರೇಷ್ಠಿ, ವಿದ್ಯಾರ್ಥಿ, ಕುಶಾಲನಗರ.

ಕೊಡಗು ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಆಗುತ್ತಿದೆ ಎಂದರೆ ಪ್ರಕೃತಿ ಮೇಲೆ ಎಷ್ಟು ದಾಳಿಯಾಗುತ್ತಿದೆ ಎನ್ನುವುದು ಅರಿಯಬೇಕು. ಇವತ್ತಿನಿಂದಲೇ ಸಾರ್ವಜನಿಕರು ಎಚ್ಚೆತ್ತುಕೊಂಡು ನದಿ ಮೂಲಗಳಿಗೆ ಹಾನಿಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು. ಇಂತಹ ಸ್ಥಿತಿ ಮುಂದಿನ ಪೀಳಿಗೆಗೆ ಬಾರದ ಹಾಗೆ ಪ್ರಕೃತಿಗೆ ಕೊಡುಗೆ ನೀಡೋಣ.
-ಲಕ್ಷ್ಮಿ ನರಸಮ್ಮ, ಗೃಹಿಣಿ, ರಾಮಸ್ವಾಮಿ ಕಣಿವೆ

ಮುಂದಿನ ೧ ತಿಂಗಳವರೆಗೆ ಮಡಿಕೇರಿಯಲ್ಲಿ ಮಳೆಯಾಗದೇ ಇದ್ದರೂ ಕೂಡ ಕುಡಿಯುವ ನೀರಿಗೆ ಯಾವುದೇ ಅಭಾವ ಉಂಟಾಗದಂತೆ ಎಚ್ಚರ ವಹಿಸಲಾಗಿದೆ. ನಗರದ ಜನತೆ ಅನಗತ್ಯವಾಗಿ ನೀರು ಪೋಲು ಮಾಡಬಾರದು
-ವಿಜಯ್, ಪೌರಾಯುಕ್ತ, ನಗರಸಭೆ, ಮಡಿಕೇರಿ

ಸದ್ಯಕ್ಕೆ ನದಿಯಲ್ಲಿ ನೀರಿನ ಹರಿವು ಇದೆ. ೧ ವಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕುಶಾಲನಗರದಲ್ಲಿ ನೀರಿನ ಕೊರತೆ ಆದರೆ ಟ್ಯಾಂಕರ್‌ಗಳ ಮೂಲಕ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಳೆ ಬಂದರೆ ನದಿಯಿಂದ ಕೃಷಿಗೆ ನೀರು ಬಳಸಿಕೊಳ್ಳುವುದು ಕಡಿಮೆ ಆಗುತ್ತದೆ. ಆಗ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ.
-ಆನಂದ್, ಸಹಾಯಕ ಅಭಿಯಂತರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ೨೮ ಡಿಗ್ರಿ ಇದ್ದ ತಾಪಮಾನ ೩೪ ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿದೆ. ಹೀಗೆ ಬಿಸಿ ಹೆಚ್ಚಾಗುತ್ತಿರುವುದರಿಂದ ಜಲಮೂಲ ಕೂಡ ಕ್ಷೀಣಿಸುತ್ತಿದೆ. ನೀರಿನ ರಕ್ಷಣೆಗೆ ಜಾಗೃತಿ ಅಗತ್ಯ.
ಕುಂಞಂಗಡ ಬೋಸ್ ಮಾದಪ್ಪ, ಪರಿಸರ ಪ್ರೇಮಿ, ಕುಮಟೂರು