ಮೈಸೂರು: ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ಆಯೋಜಿಸಿದ್ದ ಬರ ನಿರ್ವಹಣೆ ಸಿದ್ಧತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಎದುರಾಗುವ ಸವಾಲುಗಳ ನಿರ್ವಹಣೆಗೆ ವ್ಯವಸ್ಥಿತ ಪೂರ್ವ ತಯಾರಿ ನಡೆಸಬೇಕು. ಮುಂಬರುವ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವು ಪೂರೈಕೆಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಮಾತನಾಡಿ, ಮುಂದಿನ ಮುಂಗಾರಿನವರೆಗೂ ಕುಡಿಯುವ ನೀರಿಗೆ ಕೊರತೆಯಾಗದಂತೆ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಗರ ಪಾಲಿಕೆಯ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.