ಕೋಲಾರ: ಹೋಂಡಾ ಕಂಪನಿಯ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಯೋಜನೆಯಡಿ ಕೋಲಾರ ಜಿಲ್ಲೆಯ ನರಸಾಪುರ ಹೋಬಳಿ ಚೌಡದೇನಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ಶುಕ್ರವಾರದಿಂದ ಕಾರ್ಯಾರಂಭಿಸಿದ್ದು, ಗ್ರಾಮದ ನೂರಾರು ಕುಟುಂಬಗಳಿಗೆ ಅನುಕೂಲವಾಗಲಿದೆ.
ಮಾಜಿ ಸಚಿವ ದಿವಂಗತ ಸಿ.ಭೈರೇಗೌಡ ಅವರ ಪತ್ನಿ, ಶಾಸಕ ಕೃಷ್ಣಭೈರೇಗೌಡ ಅವರ ತಾಯಿ ಸಾವಿತ್ರಮ್ಮ ಟೇಪ್ ಕತ್ತರಿಸುವ ಮೂಲಕ ಘಟಕಕ್ಕೆ ಚಾಲನೆ ನೀಡಿದರು. ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಹೋಂಡಾ ಕಂಪನಿ ಹಾಗೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾಳತ್ವ ವಹಿಸಿದ ಗ್ರಾಮದ ಮುಖಂಡರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ವೇಳೆ ಹೋಂಡಾ ಕಂಪನಿ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಜಿ.ಬಿ. ವಿನೋದ್, ಗ್ರಾಮದ ಮುಖಂಡರಾದ ನಾಗಾರ್ಜುನ, ಅಣ್ಣಯ್ಯ, ಬಾಲಾಜಿ, ಚಂದ್ರಶೇಖರ್ (ಡಾಕ್ಟರ್), ರಾಮಚಂದ್ರ, ಇ.ರಘು ಮತ್ತಿತರರು ಉಪಸ್ಥಿತರಿದ್ದರು. ಜಿ.ಬಿ. ವಿನೋದ್ ಅವರಿಗೆ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.