ಪ್ರಶಾಂತ ಭಾಗ್ವತ, ಉಡುಪಿ
ಸುಡು ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭಗೊಂಡಿದೆ. ಟ್ಯಾಂಕರ್ ಮೂಲಕವಾದರೂ ಜನರು ಮನೆಗಳಿಗೆ ನೀರು ತರಿಸಿಕೊಳ್ಳುತ್ತಾರೆ. ಆದರೆ, ಅರಣ್ಯದಲ್ಲಿರುವ ಮೂಕ ಪ್ರಾಣಿಗಳಿಗೆ ಕುಡಿಯಲು ನೀರು ಕೊಡುವವರು ಯಾರು?
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ವನ್ಯಜೀವಿಗಳಿಗೂ ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೆ ಮೃತಪಡುತ್ತವೆ. ಕಾಡು ಪ್ರಾಣಿಗಳ ಈ ದಯನೀಯ ಸ್ಥಿತಿ ಕಂಡಿರುವ ಅರಣ್ಯಾಧಿಕಾರಿಗಳ ದೂರದೃಷ್ಟಿತ್ವದ ಪರಿಣಾಮದಿಂದಾಗಿ ಈ ಬಾರಿ ವನ್ಯಜೀವಿಗಳಿಗೂ ಕುಡಿಯುವ ನೀರು ಲಭಿಸುತ್ತಿದೆ.
ಕುದುರೆಮುಖ ವನ್ಯಜೀವಿ ವಿಭಾಗದ ಉಪ ಸಂರಕ್ಷಾಣಾಧಿಕಾರಿ (ಡಿಸಿಎಫ್) ಶಿವರಾಮ್ ಬಾಬು ಎಂಬವರು ಕಾಡುಪ್ರಾಣಿಗಳಿಗೂ ಕುಡಿಯಲು ನೀರು ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ಅವರ ಮಾರ್ಗದರ್ಶನದಂತೆ ಮೂಕಾಂಬಿಕಾ ಅಭಯಾರಣ್ಯದ ಕೊಲ್ಲೂರು ವನ್ಯಜೀವಿ ವಲಯದಲ್ಲಿ 3 ತೊಟ್ಟಿ (ಟ್ಯಾಂಕ್) ಮತ್ತು ಸಿದ್ದಾಪುರ ವಲಯದಲ್ಲಿ 11 ತೊಟ್ಟಿ ನಿರ್ಮಿಸಲಾಗಿದೆ. ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಹೆಬ್ರಿ ಹಾಗೂ ಆಗುಂಬೆ ವಲಯದಲ್ಲಿ ತಲಾ 4 ತೊಟ್ಟಿ ಸೇರಿ ಒಟ್ಟು 22 ಕಡೆಗಳಲ್ಲಿ ಕಾಡುಪ್ರಾಣಿಗಳಿಗೆ ಕುಡಿಯಲು ನೀರು ಸಂಗ್ರಹಿಸುವ ಟ್ಯಾಂಕ್ ನಿರ್ಮಿಸಲಾಗಿದೆ.
ಸಿದ್ದಾಪುರ ವನ್ಯಜೀವಿ ವಿಭಾಗದಲ್ಲಿ ಕಳೆದ ವರ್ಷ ಕಾಡುಪ್ರಾಣಿಗಳಿಗೆ ಆಗಿರುವ ನೀರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡಿದ್ದ ಆರ್‌ಎಫ್‌ಒ ಸಂತೋಷ್ ಪವಾರ್ ಮತ್ತು ಅವರ ತಂಡ ಈ ಬಾರಿ ಮುನ್ನೆಚ್ಚರಿಕೆಯ ಕ್ರಮ ವಹಿಸಿದೆ. ಕಾಡಿನ ಮಧ್ಯೆ ಹಾದು ಹೋಗಿರುವ ರಸ್ತೆ ದಾಟಿ ಕಾಡು ಪ್ರಾಣಿಗಳು ನೀರು ಕುಡಿಯಲು ಬರುವುದರಿಂದ ವನ್ಯಜೀವಿಗಳು ಅಪಘಾತದಿಂದ ಸಾವನ್ನಪ್ಪುತ್ತಿದ್ದವು. ಹೀಗಾಗಿ ಅಂತಹ ಆಯಕಟ್ಟಿನ ಜಾಗಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಿ, ಕಾಡು ಪ್ರಾಣಿಗಳ ಜೀವ ಉಳಿಸುವ ಕಾರ್ಯ ಮಾಡಲಾಗಿದೆ.
ಮಾತನಾಡಲು ಬಾರದ ವನ್ಯಜೀವಿಗಳ ಜಲದಾಹ ನೀಗಿಸಲು ಅರಣ್ಯದೊಳಗೆ ತೊಟ್ಟಿ ನಿರ್ಮಿಸಿ, ಕಾಡುಪ್ರಾಣಿಗಳಿಗೆ ಬಲ ನೀಡುತ್ತಿರುವ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಧಿಕಾರಿಗಳ ಈ ಕ್ರಮದಿಂದ ಮಾನವ-ವನ್ಯಜೀವಿಗಳ ಸಂಘರ್ಷಕ್ಕೂ ತಕ್ಕಮಟ್ಟಿನ ಕಡಿವಾಣ ಬೀಳಲಿದೆ ಎಂದು ಸ್ಥಳೀಯರೂ ಶ್ಲಾಘಿಸಿದ್ದಾರೆ.
ಸಿದ್ದಾಪುರ ವಲಯದಲ್ಲಿ ನಿರ್ಮಿಸಿರುವ ತೊಟ್ಟಿಗಳಲ್ಲಿ 6 ಕಡೆಗಳಲ್ಲಿ ಟ್ರ್ಯಾಕ್ ಕ್ಯಾಮರಾ ಅಳವಡಿಸಲಾಗಿದೆ. ಕೊಲ್ಲೂರು ವಲಯ- 3, ಹೆಬ್ರಿ ಹಾಗೂ ಹಾಗೂ ಆಗುಂಬೆ ವಲಯದಲ್ಲಿ ತಲಾ 4 ಟ್ರ್ಯಾಕ್ ಕ್ಯಾಮರಾ ಅಳವಡಿಸಲಾಗಿದೆ. ನಿರ್ಮಿಸಿರುವ ತೊಟ್ಟಿಗಳಲ್ಲಿ ಇದೀಗ ಚಿರತೆ, ಕಾಡುಕೋಣ, ಕಾಡುಹಂದಿ, ಕಡವೆ, ಜಿಂಕೆ, ಮುಳ್ಳುಹಂದಿ, ನವಿಲು, ಮಂಗ ಮುಂತಾದ ಪ್ರಾಣಿ ಹಾಗೂ ವಿವಿಧ ಪಕ್ಷಿಗಳೂ ಕೂಡ ಸಂತಸದಿಂದ ನೀರು ಕುಡಿಯುತ್ತಿರುವ ದೃಶ್ಯ ಸೆರೆಯಾಗುತ್ತಿದೆ. ಯಾವ ಯಾವ ಪ್ರಾಣಿಗಳು ನೀರು ಕುಡಿಯಲು ಬರುತ್ತಿವೆ ಎನ್ನುವುದನ್ನು ಟ್ರ್ಯಾಕ್ ಕ್ಯಾಮರಾದ ಸಹಾಯದಿಂದ ಅರಣ್ಯಾಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೊಟ್ಟಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.