ಜಿಲ್ಲೆ

ಆಲೆ ಮರದ ರಸ ಕುಡಿದು ಆಟಿ ಅಮಾವಾಸ್ಯೆ ಆಚರಣೆ

ಮೂಡಿಗೆರೆ: ತಾಲೂಕಿನ ಜನತೆ ಮುಂಜಾನೆ ಆಲೆ ಮರದ ರಸ ಕುಡಿಯುವ ಮೂಲಕ ಆಷಾಢ ಮಾಸದ ಕೊನೆಯಲ್ಲಿ ಭೀಮನ ಅಮಾವಾಸ್ಯೆ ಆಚರಿಸಿದರೆ, ಮಂಗಳೂರು ಭಾಗದ ತುಳುವರು ಆಟಿ ತಿಂಗಳ ಕೊನೆಯಲ್ಲಿ ಆಟಿ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದರು.

ಕೃಷ್ಣಾಪುರದ ನಿವಾಸಿ ಸವಿತಾ ವಿಠಲ ಪೂಜಾರಿ ಮಾತನಾಡಿ, ಆಟಿ ಅಮಾವಾಸ್ಯೆ ದಿನದಂದು ನಸುಕಿನಲ್ಲಿ ಆಲೆ ಮರದ ತೊಗಟೆಯನ್ನು ತಂದು ಅದಕ್ಕೆ ಜೀರಿಗೆ, ಶುಂಠಿ, ಕಾಳುಮೆಣಸು ಮತ್ತಿತರ ಪದಾರ್ಥಗಳನ್ನು ಹಾಕಿ ಕಲ್ಲಿನಿಂದ ಜಜ್ಜಿ ರಸ ಮಾಡಿ ಕುಡಿಯುತ್ತೇವೆ. ಆಟಿ ಅಮಾವಾಸ್ಯೆ ಒಂದು ದಿನ ಮಾತ್ರ ಆಲೆಮರದ ತೊಗಟೆಗೆ ಔಷಧಿಯ ಗುಣವಿದೆ. ಆ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಆಲೆ ಮರದ ರಸ ಸೇವಿಸಿದರೆ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಇದೊಂದು ಬಹುದೊಡ್ಡ ಸಂಪ್ರದಾಯವಾಗಿದೆ. ಘಟ್ಟದ ಮೇಲಿನವರಿಗೆ ಕರಾವಳಿಯ ತುಳುವರು ಹಾಲೇರಸ ಕೊಡುತ್ತಾರೆ. ಪ್ರತಿ ವರ್ಷ ಈ ಪದ್ದತಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ದೇವನಗೂಲ್ ಗ್ರಾಮದ ನಿವಾಸಿ ಎಂ.ವೀರಪ್ಪಗೌಡ ಮಾತನಾಡಿ, ಮಲೆನಾಡು ಮತ್ತು ಕರಾವಳಿಯಲ್ಲಿ ಆಟಿ ಅಮಾವಾಸ್ಯೆ ಹಬ್ಬ ಆಚರಣೆ ಸಂಭ್ರಮದಿಂದ ನಡೆಯುತ್ತದೆ. ಆಲೆ ರಸ ಸೇವನೆ ಜತೆಗೆ ಮರಕೆಸುವಿನ ಸೊಪ್ಪಿನಲ್ಲಿ ತಯಾರಿಸಿದ ಖಾದ್ಯವಾದ ಪತ್ರಡೆ, ಗದ್ದೆಯಲ್ಲಿ ಸಿಗುವ ಏಡಿಯಿಂದ ತಯಾರಿಸಿದ ಪದಾರ್ಥ, ಕಾಡಿನಲ್ಲಿ ಸಿಗುವ ಕಳಿಲೆಯಿಂದ ತಯಾರಿಸಿದ ಸಾರು ಮತ್ತಿತರೆ ಪದಾರ್ಥಗಳನ್ನು ಮಾಡಿ ಸೇವಿಸುವುದು ರೂಢಿಯಲ್ಲಿದೆ. ಇದು ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಪದ್ದತಿಯಾಗಿದೆ. ಈ ಪದ್ಧತಿಯನ್ನು ನಡೆಸಿಕೊಂಡು ಬಂದವರು ರೋಗ ರುಜಿನಗಳಿಂದ ಮುಕ್ತವಾಗಿ ಆರೋಗ್ಯ ಕಾಪಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.