ಹೊಸದುರ್ಗ: ವಿರಾಟ್ ಹಿಂದು ಮಹಾಸಾಗರ ಗಣಪತಿಯ ವಿಸರ್ಜನೆ ಅಂಗವಾಗಿ ಪಟ್ಟಣದಲ್ಲಿ ಸೆ.30ರಂದು ಶೋಭಾಯಾತ್ರೆ ನಡೆಯಲಿದೆ. ಯಾತ್ರೆ ಹಿನ್ನೆಲೆಯಲ್ಲಿ ಪಟ್ಟಣವನ್ನು ಕೇಸರಿ, ಬಿಳಿ ಬಾವುಟ, ತೋರಣಗಳಿಂದ ಅಲಂಕರಿಸಲಾಗಿದೆ.
ಶನಿವಾರ ಮಧ್ಯಾಹ್ನ 12 ಗಂಟೆಗೆ ಟಿ.ಬಿ.ವೃತ್ತದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಗಣಪತಿ ಹಾಗೂ ಹನುಮಂತನ ಬೃಹತ್ ಕಟೌಟ್‌ಗಳನ್ನು ಮೆರವಣಿಗೆ ಸಾಗುವ ಹಾದಿಯಲ್ಲಿ ಅಳವಡಿಸಲಾಗಿದೆ.
ಟಿ.ಬಿ.ವೃತ್ತದಲ್ಲಿರುವ ಸಾರ್ಮಥ್ಯ ಸೌಧದ ಆವರಣದಲ್ಲಿ ಸ್ಥಾಪಿಸಲಾಗಿರುವ 13 ಆಡಿ ಎತ್ತರದ ಆನೆಯ ಮೇಲೆ ವಿರಾಜಮಾನವಾಗಿರುವ ಗಣೇಶ ಮೂರ್ತಿ ಶೋಭಾಯಾತ್ರೆ ನಡೆಯಲಿದ್ದು, ಅಂದಾಜು 20 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.
ವಿವಿಧ ಸಂಘ-ಸಂಸ್ಥೆಗಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿರಂತರ ತಿಂಡಿ, ದಾಸೋಹ, ನೀರು, ಮಜ್ಜಿಗೆ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಗಣಪತಿ ಪೆಂಡಾಲ್‌ನಲ್ಲಿ ಶುಕ್ರವಾರ ಮಹಾಗಣಪತಿ ಹೋಮ ಸೇರಿ ವಿವಿಧ ಪೂಜಾ ಕಾರ್ಯಗಳು ನೆರವೇರಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಬಳಿಕ ಅನ್ನ ದಾಸೋಹ ಆಯೋಜಿಸಲಾಗಿದೆ.
ಚಂದನ್ ಶೆಟ್ಟಿ ಲೈವ್ ಸಂಗೀತ: ಶೋಭಾಯಾತ್ರೆಯಲ್ಲಿ ಖ್ಯಾತ ರಾಪ್ ಗಾಯಕ ಚಂದನ್ ಶೆಟ್ಟಿ ಭಾಗವಹಿಸಲಿದ್ದಾರೆ. ಮೆರವಣಿಗೆಯ ಜತೆ ಸಾಗಲಿರುವ ಅತ್ಯಾಧುನಿಕ ಸಂಗೀತ ಪರಿಕರಗಳನ್ನು ಒಳಗೊಂಡಿರುವ ಡಿಜೆ ವಾಹನದಲ್ಲಿ ವಿವಿಧ ಗೀತೆಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಲಿದ್ದಾರೆ.
ಶೋಭಾಯಾತ್ರೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸೇರುವ ನೀರಿಕ್ಷೆಯಿದೆ. ಗಾಯಕ ಚಂದನ್ ಶೆಟ್ಟಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಶುಕ್ರವಾರ ಗಣಪತಿ ಹೋಮ ಹಾಗೂ ಅನ್ನ ದಾಸೋಹ ಅಯೋಜಿಸಲಾಗಿದೆ. ಶೋಭಾಯಾತ್ರೆ ಜನರು ಹೆಚ್ಚಿನ ಸಹಕಾರ ನೀಡಬೇಕು.-ಪ್ರದೀಪ್ ಅಧ್ಯಕ್ಷ, ವಿರಾಟ್ ಹಿಂದು ಮಹಾ ಸಾಗರ ಗಣಪತಿ ಭಕ್ತಮಂಡಳಿ