ಜಿಲ್ಲೆ

ಬಡವರ ಸೂರಿನ ಕನಸು ಶೀಘ್ರ ನನಸು: ಜಿಲ್ಲಾ ಸಚಿವ ಡಿ.ಸುಧಾಕರ್ ಭರವಸೆ

ಹರ್ಷ ನ.ಪುರೋಹಿತ

ಹಿರಿಯೂರು: ಬಡವರ ಸ್ವಂತ ಸೂರಿನ ಕನಸು ನನಸಾಗಿಸುವುದು ಪುಣ್ಯದ ಕೆಲಸ. ಇದರ ಸಾಕಾರಕ್ಕೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಮಂಗಳವಾರ ವಸತಿ, ಕುಡಿವ ನೀರು, ರಸ್ತೆ ಅಗಲೀಕರಣ ಕುರಿತು ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜತೆಗೆ ಜನಪರ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ ವಿಶೇಷ ಅನುದಾನ ಮೀಸಲಿಟ್ಟಿದ್ದು, ನಗರ ವ್ಯಾಪ್ತಿಯ ಸ್ಲಂಗಳಲ್ಲಿ ನಿವೇಶನ, ವಸತಿ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಹಿರಿಯೂರಿನಲ್ಲಿ 18 ಸ್ಲಂಗಳ ಪೈಕಿ 6 ಅನಧಿಕೃತವಾಗಿದ್ದು, ಸರ್ಕಾರದ ನಿಯಮ ಮೀರಿ ಹಕ್ಕುಪತ್ರ ವಿತರಿಸಲಾಗಿದೆ. ಮರುಪರಿಶೀಲಿಸಿ ಮಾಹಿತಿ ನೀಡುವಂತೆ ಸಚಿವರು-ಡಿಸಿ ತಾಕೀತು ಮಾಡಿದರು.

ಸ್ಲಂ ನಿವಾಸಿಗಳಿಗೆ ನಿವೇಶನದ ಹಕ್ಕುಪತ್ರ ವಿತರಣೆ, ವಸತಿ, ರಸ್ತೆ, ವಿದ್ಯುತ್ ಅಗತ್ಯ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅರ್ಹ ಫಲಾನುಭವಿಗಳನ್ನು ಗುರುತಿಸಿ ವಸತಿ ಸೌಲಭ್ಯ ಕಲ್ಪಿಸಲು ಕ್ರಮವಹಿಸುವಂತೆ ಸಚಿವರು ಸೂಚಿಸಿದರು.

1500 ಹಕ್ಕುಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ವಸತಿ ಸಚಿವ ಜಮೀರ್ ಅಹಮ್ಮದ್ ಅವರನ್ನು ಆಹ್ವಾನಿಸಿ ಹಕ್ಕು ಪತ್ರ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ರಸ್ತೆ ಅಗಲೀಕರಣ:
ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಬೀದರ್-ಶ್ರೀರಂಗಪಟ್ಟಣ ರಸ್ತೆ/ಮುಖ್ಯ ರಸ್ತೆ ಅಗಲೀಕರಣಕ್ಕೆ ತ್ವರಿತ ಚಾಲನೆ ನೀಡಬೇಕು. ರಸ್ತೆ ಬದಿಯ ಕಟ್ಟಡ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರವು ಮಾಡಿಸಬೇಕು. ವೇದಾವತಿ ಸೇತುವೆ ಸಮೀಪದ ನಗರ ಸಭೆಗೆ ಸೇರಿದ ಹಳೇ ಕಟ್ಟಡ, ಸತ್ಯನಾರಾಯಣಸ್ವಾಮಿ ದೇಗುಲ, ವಕ್ಫ್ ಕಟ್ಟಡ ಸೇರಿ ಪ್ರಮುಖ ಕಟ್ಟಡ ತೆರವುಗೊಳಿಸಿ ಕಾಮಗಾರಿ ಆರಂಭಿಸುವಂತೆ ಸಚಿವರು ಹೇಳಿದರು.

ಕುಡಿವ ನೀರು:
ತಾಲೂಕಿನ ಐಮಂಗಲ ಹೋಬಳಿಯ 37 ವ್ಯಾಪ್ತಿಯ ಹಳ್ಳಿಗಳಿಗೆ ಶಾಶ್ವತ ಕುಡಿವ ನೀರು ಒದಗಿಸುವ ಬಹು ಗ್ರಾಮ ಕುಡಿವ ನೀರು ಯೋಜನೆ ಪೂರ್ಣಗೊಂಡಿದೆ. ಜೆ.ಜಿ.ಹಳ್ಳಿ ಹೋಬಳಿಯ 38 ಹಳ್ಳಿಗಳ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ 10 ವರ್ಷ ಕಳೆದರೂ ಕಾಮಗಾರಿ ಏಕೆ ಪೂರ್ಣಗೊಂಡಿಲ್ಲ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬಹು ಕುಡಿವ ನೀರಿನ ಯೋಜನೆ ಕಾಮಗಾರಿ ಸ್ಥಳದಲ್ಲಿ ಜಾಕ್‌ವೆಲ್ ಅಳವಡಿಸಲು, ನೀರಾವರಿ ಇಲಾಖೆಯಿಂದ ತಡವಾಗಿ ಅನುಮತಿ ನೀಡಿದ್ದು, ಕಾಮಗಾರಿ ವಿಳಂಬವಾಗಿದೆ. ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಪಂಪ್ ಮೋಟರ್ ಅಳವಡಿಸಿ ಶೀಘ್ರ ಟ್ರಯಲ್ ರನ್ ಮಾಡಲಾಗುವುದು ಎಂದು ಗುತ್ತಿಗೆದಾರ ರವೀಂದ್ರ ಡಿ.ಕಿತ್ತೂರು ಸಭೆಗೆ ಮಾಹಿತಿ ನೀಡಿದರು.

ಜಲಜೀವನ್ ಮಿಷನ್ ಸೇರಿ ಕುಡಿವ ನೀರಿನ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.

ವಿವಿ ಸಾಗರ-ಗಾಯತ್ರಿ ಜಲಾಶಯ ತಾಲೂಕಿಗೆ ಪ್ರಕೃತಿ ಕೊಟ್ಟಿರುವ ವರ. ಜಲಾಶಯದಿಂದ ನೇರ ಪೈಪ್ ಲೈನ್ ಮೂಲಕ ತಾಲೂಕಿನ ಎಲ್ಲ ಹಳ್ಳಿಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವರ ಹೇಳಿದರು.