ಉಡುಪಿ: ಓದು ಎಂಬುದು ಪ್ರೇರಕ ಶಕ್ತಿ. ಪಠ್ಯ&ಪಠ್ಯೇತರ ಪುಸ್ತಕಗಳನ್ನು ಓದುವುದನ್ನು ರೂಡಿಸಿಕೊಂಡಾಗ ಸಾಹಿತ್ಯದ ರುಚಿ ಬೆಳೆಯುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವುದನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಾಹಿತಿ ಗಿರಿಜಾ ಹೆಗಡೆ ಗಾಂವ್ಕರ್ ಹೇಳಿದರು.
ಸೋಮವಾರ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ- ಅಂಗವಾಗಿ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಕನ್ನಡ ಪುಸ್ತಕ ಓದಿ ಗ್ರಹಣ ಶಕ್ತಿ ಬೆಳೆಸುವ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಾಹಿತಿ ಸಂಗೀತಾ ಜಾನ್ಸನ್ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಓದುವುದನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು. ಅದು ಮನಸ್ಸನ್ನು ಉಲ್ಲಾಸಗೊಳಿಸುವುದರ ಜೊತೆ ಜ್ಞಾನವನ್ನು ಹೆಚ್ಚಿಸುತ್ತದೆ. ಓದುವ ಕಲೆಯನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳುವಂತೆ ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕಿ ಸಿ. ರಂಜಿತ ನಿರೂಪಿಸಿದರು, ಪ್ರಥಮ ದರ್ಜೆ ಸಹಾಯಕಿ ಶಕುಂತಳ ಕುಂದರ್ ವಂದಿಸಿದರು.