ಮಡಿವಾಳ: ತಾಲೂಕಿನ ಕಸಬಾ ಹೋಬಳಿಯ ತೊರ್ನಹಳ್ಳಿಯಲ್ಲಿ ಶ್ರೀ ದ್ರೌಪತಾಂಬ ಹಾಗೂ ಶ್ರೀ ಧರ್ಮರಾಯ ಸ್ವಾಮಿಯ 59ನೇ ಹಸಿಕರಗ ಮಹೋತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಉತ್ಸವದ ಪ್ರಯುಕ್ತ ದೇವಾಲಯಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ, ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ಪೂಜೆ ಸಲ್ಲಿಸುವ ಮೂಲಕ ಕರಗದ ಪೂಜಾರಿಗಳಾದ ರಾಮಕೃಷ್ಣಪ್ಪ, ಶಂಕರಪ್ಪ, ಚಿನ್ನಪ್ಪ ಅವರು ಹಸಿಕರಗ ಕೈಯಲ್ಲಿ ಹಿಡಿದು ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡಿದರು. ಕರಗಕ್ಕೆ ಮಲ್ಲಿಗೆ ಹೂವು ಸಮರ್ಪಿಸುತ್ತ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ವೀರಕುಮಾರರು ಕತ್ತಿಗಳನ್ನು ಹಿಡಿದು ಗೋವಿಂದ ನಾಮಸ್ಮರಣೆ ಮಾಡುತ್ತಾ ಕರಗದ ಹಿಂದೆ ಹೆಜ್ಜೆ ಹಾಕಿದರು.
ಮೇ 11ರಂದು ಹೂವಿನ ಕರಗ ನಡೆಯಲಿದ್ದು, ಈ ವರ್ಷ ಕರಗದ ಪೂಜಾರಿ ರಾಮಕೃಷ್ಣಪ್ಪ ಅವರು ಕರಗ ಹೊರುವ ಮೂಲಕ ದೈವಕಾರ್ಯ ನೆರವೇರಿಸಲಿದ್ದಾರೆ.
ಗ್ರಾಮದ ವಿ.ಮುನಿಯಪ್ಪ, ಟಿ.ಸಿ.ಶ್ರೀನಿವಾಸ್, ಟಿ.ಆರ್.ರಮೇಶ್ ಬಾಬು, ಟಿ.ಎಂ.ರೋಜಾ ರಾಜಪ್ಪ, ಗೌಡರ ನಾರಾಯಣಪ್ಪ, ಕೃಷ್ಣಪ್ಪ ಟಿ.ಸಿ.ನಾರಾಯಣಪ್ಪ, ಟಿ.ಪಿ.ರಾಜಣ್ಣ, ತಾತೆಪ್ಪ, ನಾರಾಯಣಪ್ಪ, ಎಸ್.ರಾಮಪ್ಪ, ಕುಲದ ಗೌಡರು, ಯಜಮಾನರು ಸೇರಿ ತೊರ್ನಹಳ್ಳಿ, ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ ಗ್ರಾಮಸ್ಥರು ಇದ್ದರು.