ಜಿಲ್ಲೆ

ನಾಟಕಗಳು ಸಂಸ್ಕೃತಿಯ ಜೀವಾಳ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಾಟಕಗಳು ಸಂಸ್ಕೃತಿಯ ಜೀವಾಳ. ರಂಗಕರ್ಮಿಗಳು ರಂಗದ ಮೇಲೆ ಸಂತಸದೊಂದಿಗೆ ಕಾಲ ಕಳೆಯುತ್ತಿದ್ದರೂ, ಪ್ರಸ್ತುತ ಸಂಕಷ್ಟದಲ್ಲಿದ್ದಾರೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ ಎಂದು ಚಿಂತಕ ಡಾ. ಗಣೇಶ ದೇವಿ ಕಳವಳ ವ್ಯಕ್ತಪಡಿಸಿದರು.

ನಗರದ ಸೃಜನಾ ರಂಗಮಂದಿರದಲ್ಲಿ ನಿರ್ದಿಗಂತ ಸಂಸ್ಥೆ ವತಿಯಿಂದ ಏರ್ಪಡಿಸಿರುವ 4 ದಿನಗಳ ನಿರ್ದಿಗಂತ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಭಾವಿ ಮಾಧ್ಯಮವಾಗಿರುವ ರಂಗಭೂಮಿ ದೇಹ ಮತ್ತು ಆತ್ಮ ಒಂದಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸಂಸ್ಕೃತಿಯ ನಾಡಿ ಮಿಡಿತ ರಂಗಭೂಮಿಯಾಗಿದೆ. ಕನ್ನಡ ರಂಗಭೂಮಿ ಮರಾಠಿ ರಂಗಭೂಮಿಯ ಬೇರು. 18ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಉತ್ತರ ಕರ್ನಾಟಕ ಭಾಗದ ಕಲಾವಿದರು ಸಂಗೀತ, ನಾಟಕ ಕಲೆ ಬೆಳೆಸಿದರು. ಆದರೆ, ಇದೀಗ ಮರಾಠಿ ರಂಗಭೂಮಿ ಕಳೆಗುಂದಿದೆ ಎಂದರು.

ಹಿರಿಯ ಚಿಂತಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಜನಪದ, ವೃತ್ತಿರಂಗಭೂಮಿಯ ಆಶಯಗಳನ್ನು ಅರ್ಥೈಸಿಕೊಳ್ಳಬೇಕು. ನಮ್ಮ ಕಲೆಗಳೇ ನಮಗೆ ಕವಚಗಳಾಗಬೇಕು. ಸಾಮಾಜಿಕ ಸವಾಲುಗಳನ್ನು ಎದುರಿಸಲು ಕಲೆಗಳನ್ನು ಬಳಸುವುದು ಅಗತ್ಯ. ರಂಗಭೂಮಿ ಉಳಿವಿಗೆ ರಣತಂತ್ರ ಹೆಣೆಯಬೇಕು ಎಂದರು.

ಪ್ರತಿಭಟನೆಗೆ ಜನಪದ ಮುಖ್ಯ ವೇದಿಕೆಯಾಗಿದೆ. ಬಹು ಸಂಸತಿಗಳ ಸಮ್ಮಿಲನವಾಗಿರುವ ಉತ್ತರ ಕರ್ನಾಟಕದಲ್ಲಿ ಧರ್ಮ ಕಾಣುತ್ತದೆ. ಕೋಮು ಸೌಹಾರ್ದತೆ ಹಾಸು ಹೊಕ್ಕಾಗಿದೆ. ಈ ಪರಂಪರೆ ಮುಂದುವರೆಸುವುದು ಅಗತ್ಯ. ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸವನ್ನು ಎಲ್ಲರೂ ಖಂಡಿಸಬೇಕು. ಏಕರೂಪವನ್ನು ವಿರೋಧಿಸಿ ಒಕ್ಕೂಟ ವ್ಯವಸ್ಥೆ ಬೆಂಬಲಿಸಬೇಕು ಎಂದರು.

ನಟ ಪ್ರಕಾಶ ರಾಜ್​ ಮಾತನಾಡಿದರು. ಡಾ. ಪ್ರಕಾಶ ಗರುಡ ಮಾತನಾಡಿದರು. ನಂತರ ನಾಟಕ ಪ್ರದರ್ಶನ, ಸಂವಾದ, ಸಂಗ ಸಂಗೀತ ಪ್ರಸ್ತುತಪಡಿಸಲಾಯಿತು.