ಜಿಲ್ಲೆ

ರಂಗಭೂಮಿಗೆ ಹಿರಿಯರ ಕೊಡುಗೆ ಅಪಾರ, ರಂಗ ಸಾಧಕರಿಗೆ ಸನ್ಮಾನ, ನಾಟಕೋತ್ಸವ

Dharwada - Basavaraj Idli

ಹುಬ್ಬಳ್ಳಿ: ಕನ್ನಡ ನಾಟಕಗಳು ಹಾಗೂ ರಂಗಭೂಮಿಯ ಹಿರಿಮೆ ಬೆಳಗಿ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಖ್ಯಾತ ನಾಟಕಕಾರ ಡಾ. ಗೋವಿಂದ ಮಣ್ಣೂರ ಮತ್ತು ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅವರ ಪಾತ್ರ ಹಿರಿದಾದುದು ಎಂದು ಕೆಎಲ್ಇ ಜೆ.ಜಿ.ಎಂ ವೈದ್ಯಕಿಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಎಂ.ಜಿ. ಹಿರೇಮಠ ಅಭಿಪ್ರಾಯ ಪಟ್ಟರು.

ಇಲ್ಲಿಯ ಸುನಿಧಿ ಕಲಾ ಸೌರಭ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸವಾಯಿ ಗಂಧರ್ವ ಮಂದಿರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಡಾ. ಗೋವಿಂದ ಮಣ್ಣೂರ ನಾಟಕೋತ್ಸವ ಹಾಗೂ ರಂಗ ಸಾಧಕರಿಗೆ ರಂಗ ಸೌರಭ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಬ್ಬರು ಮಹನೀಯರು ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ಗೋವಿಂದ ಮಣ್ಣೂರ ಮಾತನಾಡಿ, ಹೊಸ ನಾಟಕಗಳ ರಚನೆ ಯಾಗಬೇಕು. ಅದರಲ್ಲಿಯೂ ಮಹಿಳೆಯರು ನಾಟಕಗಳನ್ನು ಬರೆಯುವಲ್ಲಿ ಹೆಚ್ಚು ಆಸಕ್ತಿ ತೋರಬೇಕೆಂದರು.

ನ್ಯಾಯವಾದಿ ಡಾ. ಉದಯ ದೇಸಾಯಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸುನಿಧಿ ಕಲಾ ಸೌರಭ ಅಧ್ಯಕ್ಷ ಸುಭಾಸ ನರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಸರಾಂತ ಪ್ರಸಾದನ ಕಲಾವಿದ ಸಂತೋಷ ಮಹಾಲೆ, ಬಸವರಾಜ ಚಕ್ರಸಾಲಿ ಅವರಿಗೆ ರಂಗ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.

20 ಜನ ಕಲಾವಿದರು ಪ್ರಥಮ ಬಾರಿ ರಂಗಭೂಮಿಗೆ ಪದಾರ್ಪಣೆ ಮಾಡಿದರು. ಮಾವ ನಾಟಕದಲ್ಲಿ ಸುಭಾಸ ನರೇಂದ್ರ ಹಾಗೂ ಪಾರ್ವತಿಬಾಯಿ ಪಂಚಸೂತ್ರ ನಾಟಕದಲ್ಲಿ ವೀಣಾ ಅಠವಲೆ ಅವರ ಅಭಿನಯ ಜನಮನ ಸೂರೆಗೊಂಡಿತು.

ಮೈಲಾರಲಿಂಗ ಕಬ್ಬೂರ, ಸುಜಾತಾ ಹೆಬ್ಬಾಳದ, ಶ್ರೀನಿವಾಸ ಎ., ಸುಜಾತಾ ಸಿಂಧಗಿ, ಕಿಶೋರ ಕುಲಕರ್ಣಿ, ಸವಿತಾ ರೇವಣಕರ, ಸ್ವಾತಿ ಸುಣಗಾರ, ನವನೀತಾ ಹಿರೇಮಠ, ಲಕ್ಷ್ಮಣ ಸುಣಗಾರ, ಹೇಮಲತಾ ತಾಮಣಕರ, ಅಲಕಾ ಚಿಲ್ಲಾಪುರ ಇತರರು ವಿವಿಧ ಪಾತ್ರಗಳಿಗೆ ಜೀವ ತುಂಬಿದರು.