ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಕರ್ಮಿ ಡಾ. ಡಿ.ಎಸ್.ಚೌಗಲೆ ರಚನೆ, ಕಾಂತೇಶ್ ಕದರಮಂಡಲಗಿ ನಿರ್ದೇಶನದ ವಖಾರಿ ಧೂಸ ಕೃತಿ ಆಧಾರಿತ ನಾಟಕ ಪ್ರದರ್ಶನಗೊಂಡಿತು.  
ಜಿಲ್ಲೆ

ನಾಟಕ ಪ್ರಯೋಗವೇ ಹೊರತು ಪ್ರದರ್ಶನವಲ್ಲ: ರಂಗಕರ್ಮಿ ಡಾ. ಡಿ.ಎಸ್.ಚೌಗಲೆ

Shivamogga - Desk - Vinayakumar D B

ಶಿವಮೊಗ್ಗ: ಕನ್ನಡ ರಂಗಭೂಮಿಯಲ್ಲಿ ರಚನೆಕಾರರು ಮತ್ತು ನಿರ್ದೇಶಕರ ಹೆಸರಿನಲ್ಲಿ ನಾಟಕಗಳು ನಡೆದರೆ, ಮರಾಠಿ ರಂಗಭೂಮಿಯಲ್ಲಿ ನಟನ ಹೆಸರಿನಲ್ಲಿ ನಾಟಕ ನಡೆಯುತ್ತದೆ. ಪ್ರಚಲಿತ ಮತ್ತು ಸಮಕಾಲೀನ ವಿದ್ಯಾಮಾನಗಳ ಕಥಾಹಂದರ ಹೊಂದಿರುವ ರಂಗಭೂಮಿ ಶೈಲೀಕೃತ ಪ್ರಯೋಗ ಶಾಲೆ. ನಾಟಕ ಪ್ರಯೋಗವೇ ಹೊರತು ಪ್ರದರ್ಶನವಲ್ಲ ಎಂದು ರಂಗಕರ್ಮಿ ಡಾ. ಡಿ.ಎಸ್.ಚೌಗಲೆ ಹೇಳಿದರು.

ಸುವರ್ಣ ಸಂಸ್ಕೃತಿ ಭವನದಲ್ಲಿ ಸಹ್ಯಾದ್ರಿ ರಂಗತರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ತಾವು ರಚಿಸಿರುವ ಹಾಗೂ ಕಾಂತೇಶ್ ಕದರಮಂಡಲಗಿ ನಿರ್ದೇಶನದ ವಖಾರಿ ಧೂಸ ಕೃತಿ ಆಧಾರಿತ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕಲೆ ಮನುಷ್ಯನ ಮೂಲ ಸ್ವಭಾವಗಳಲ್ಲೊಂದು. ಜಾತಿ, ಮತ, ಧರ್ಮ ಸೇರಿ ಮಿಕ್ಕೆಲ್ಲ ಭೇದಗಳನ್ನು ಮೀರಿ ಬೆಳೆಯುವ ಶಕ್ತಿ ಹೊಂದಿರುವಂಥದ್ದು. ಎಲ್ಲ ಲಲಿತಕಲೆಗಳು ಅದರಲ್ಲೂ ವಿಶೇಷವಾಗಿ ರಂಗಭೂಮಿ ಹೆಚ್ಚು ಸಾಮಾಜಿಕ ಹೊಣೆಗಾರಿಕೆ ಹೊಂದಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಕಲೆಯನ್ನು ರಂಗಭೂಮಿ ಮೈಗೂಡಿಸುತ್ತದೆ ಎಂದರು.
ಎಲ್ಲ ಕಲೆಗಳು ಮೂಲಭೂತವಾಗಿ ಕಲಾವಿದರಿಂದ ಕಲಾಸಕ್ತರಿಗಾಗಿಯೇ ಸೃಷ್ಟಿಗೊಳ್ಳುತ್ತವೆ. ಕಲೆಯ ಅಂತಮ ಗುರಿ ಕಲಾಸಕ್ತರನ್ನು ತಲುಪುವುದೇ ಆಗಿದೆ. ಇದಕ್ಕೆ ರಂಗಭೂಮಿಯೂ ಹೊರತಲ್ಲ. ಯುವಜನತೆಯನ್ನು ಸೆಳೆಯುವ ವಿವೇಕ, ವಿಚಾರ ಶಕ್ತಿ ವಾಸ್ತವಿಕ ನಾಟಕಗಳಿಂದ ಮಾತ್ರ ಸಾಧ್ಯವೆಂದು ಅಭಿಪ್ರಾಯಪಟ್ಟರು.
ವಾಸ್ತವವಾದಿ ನಾಟಕಗಳು ಉತ್ತಮ ನಟರನ್ನು ಬಯಸುತ್ತವೆ. ಉತ್ತಮ ನಟರಿದ್ದರೆ ಮಾತ್ರ ವಾಸ್ತವವಾದಿ ನಾಟಕಗಳು ಗೆಲ್ಲುತ್ತವೆ. ಕನ್ನಡದ ಸಂದರ್ಭದಲ್ಲಿ ಜಿ.ಬಿ.ಜೋಷಿ, ಶ್ರೀರಂಗ, ಲಂಕೇಶ್, ಕೈಲಾಸಂ, ಕಾರ್ನಾಡರಂತಹ ಬರಹಗಾರರು ವಾಸ್ತವವಾದಿ ನಾಟಕಗಳ ಕೊರತೆ ನೀಗಿಸಿದ್ದಾರೆ ಎಂದರು.
ಸಹ್ಯಾದ್ರಿ ರಂಗತರಂಗದ ಅಧ್ಯಕ್ಷ ಬಿ.ಆರ್.ಚಂದ್ರಯ್ಯ ಮಾತನಾಡಿ, ಸಹ್ಯಾದ್ರಿ ರಂಗತರಂಗವು ಕಳೆದ ನಾಲ್ಕು ದಶಕಗಳಿಂದ ರಂಗಭೂಮಿ ಚಟುವಟಿಕೆಯಲ್ಲಿ ಸಕ್ರಿಯವಾಗಿದೆ. ರಾಜ್ಯ-ರಾಷ್ಟ್ರವ್ಯಾಪ್ತಿಯಲ್ಲಿ ನಾಟಕಗಳನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ರಂಗಾಯಣದ ಆಡಳಿತಾಧಿಕಾರಿ ಎ.ಸಿ.ಶೈಲಜಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಪ್ರಾಚಾರ್ಯ ಡಾ. ಎಚ್.ಎಸ್.ನಾಗಭೂಷಣ ಉಪಸ್ಥಿತರಿದ್ದರು.