ಕಾರ್ಕಳ: ಜೀವನೋತ್ಸಾಹ ಮೂಡಿಸುವ ಹಾಗೂ ಪರಸ್ಪರ ಅರಿತು ಬೆರೆತು ಸಾಮರಸ್ಯದಿಂದ ಸಂತೋಷವಾಗಿ ಬಾಳುವ ಬಗೆ ತಿಳಿಸುವ ಕಲೆಯಾದ ನಾಟಕೋತ್ಸವವನ್ನು ನಿರಂತರವಾಗಿ ಕಾರ್ಕಳ ಸಂಘಟಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಾಯ ಎಂ.ಪೈ ಹೇಳಿದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ ಹಾಗೂ ರಂಗ ಸಂಸ್ಕೃತಿ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ ಹನ್ನೊಂದನೇ ವರ್ಷದ ಬಿ.ಗಣಪತಿ ಪೈ ರಂಗೋತ್ಸವ ಮಾಗಿ- ಸುಗ್ಗಿ ನಾಟಕ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಧಾರವಾಡದ ಯಕ್ಷರಂಗಾಯಣ ತಂಡದ ಮುಖ್ಯಸ್ಥರನ್ನು ಗೌರವಿಸಲಾಯಿತು. ಕಾರ್ಕಳ ಯಕ್ಷರಂಗಾಯಣ ನಿರ್ದೇಶಕ ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ ಪ್ರಸ್ತಾವನೆಗೈದರು. ನಾಟಕೋತ್ಸವದ ಸಂಚಾಲಕ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ವಸಂತ ವಂದಿಸಿದರು. ಗಣೇಶ್ ಜಾಲ್ಸೂರ್ ನಿರೂಪಿಸಿದರು. ಧಾರವಾಡದ ಯಕ್ಷರಂಗಾಯಣ ತಂಡದಿಂದ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ಸತ್ತವರ ನೆರಳು ನಾಟಕ ಪ್ರದರ್ಶನಗೊಂಡಿತು.