ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ಸಾಮಾಜಿಕ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಹೇಳಿದರು.
ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಪವಾಡಶ್ರೀ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರದಿಂದ ಸಾಣೆಹಳ್ಳಿಮಠದ ಶಿವಸಂಚಾರ ಕಲಾ ತಂಡ ಆಯೋಜಿಸಿದ್ದ 3 ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ದೇಶಿಯ ಕಲೆಗಳು ಸನಾತನ ಧರ್ಮದ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುತ್ತಿವೆ. ಪ್ರದರ್ಶನ ಕಲೆಗಳಿಂದ ಸಮಾಜದ ಅತ್ಯಂತ ಕೆಳವರ್ಗದ ಜನಸಾಮಾನ್ಯರಿಗೂ ಧರ್ಮದ ಅರಿವು, ನೈತಿಕ ಮೌಲ್ಯಗಳನ್ನು ತಿಳಿಸುವ ಕೆಲಸವಾಗುತ್ತಿದೆ. ಆದರೆ ಆಧುನಿಕ ಕಾಲದಲ್ಲಿ ಕಲೆಗಳ ಮೂಲ ಉದ್ದೇಶ ಕಳೆದುಕೊಂಡು ಕೇವಲ ಮನರಂಜನೆಗೆ ಸೀಮಿತವಾಗಿರುವುದು ಬೇಸರದ ಸಂಗತಿ, ಇದರಿಂದ ಸಮಾಜದಲ್ಲಿ ನೈತಿಕತೆಯ ಮಟ್ಟ ಕುಸಿಯುತ್ತಿದೆ. ಸಾಣೆಹಳ್ಳಿಮಠದ ಶಿವಸಂಚಾರ ಕಲಾ ತಂಡ ಮಾನವೀಯ ಸಂದೇಶವನ್ನು ನೀಡುವ ನಿಟ್ಟಿಲ್ಲಿ ಸಾಕಷ್ಟು ಮಂದಿ ಕಲಾವಿದರನ್ನು ಹುಟ್ಟು ಹಾಕಿ ಪ್ರತಿ ವರ್ಷ ನಾಟಕ ಪ್ರದರ್ಶನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಲಾವಿದರ ಬಳಗದ ಅಧ್ಯಕ್ಷ ಜಿ.ಗಂಗರಾಜು ಮಾತನಾಡಿ, ಬಸವಣ್ಣ ಅವರ ಕಾಯಕ ತತ್ವವನ್ನು ಅಳವಡಿಸಿಕೊಂಡು ದೇಶಾದ್ಯಂತ ಶರಣು ಕಾಯಕಕ್ಕೆ ಒತ್ತು ನೀಡಿದ್ದು, ಬಸವಣ್ಣ ಅವರ ತತ್ವ ಸಿದ್ಧಾಂತವನ್ನು ಜನರಿಗೆ ತಿಳಿಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಭಾರತೀಯ ಕಲೆಗಳು ಮನರಂಜನೆಯ ಜತೆಗೆ ಸಮಾಜ ಪರಿವರ್ತನೆಗೂ ಕಾರಣವಾಗುತ್ತಿವೆ. ನಾಡಿನ ಕಲಾ ಪ್ರಕಾರಗಳಿಗೆ ಬಹುದೊಡ್ಡ ಇತಿಹಾಸವಿದೆ. ಅದರಲ್ಲೂ ರಂಗಭೂಮಿ ಕಲೆಗೆ ಆಕರ್ಷಿತರಾಗಿರುವ ನಾಡಿನ ಜನತೆ ರಂಗಕಲೆಯನ್ನು ಅತಿ ಎತ್ತರಕ್ಕೆ ಬೆಳೆಸಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿದ್ದ ಬಸವಣ್ಣ ದೇವರಮಠ ಇದೇ ಮೊದಲ ಬಾರಿಗೆ ನಾಟಕೋತ್ಸವ ಏರ್ಪಡಿಸಿ ಕಲೆ, ಕಲಾವಿದರ ಶ್ರೇಯೋಭಿವೃದ್ಧಿಗೆ ಮುಂದಾಗಿರುವುದು ಪ್ರಶಂಸನೀಯ ಎಂದರು.