ಹುಬ್ಬಳ್ಳಿ: ಖ್ಯಾತ ರಂಗಭೂಮಿ ಹಾಗೂ ಸಿನಿಮಾ ನಟ ಯಶವಂತ ಸರದೇಶಪಾಂಡೆ (60) ಅವರು ಬೆಂಗಳೂರಿನಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದರು.
ಬೆಂಗಳೂರಿನಲ್ಲಿದ್ದ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗ್ಗೆ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ರಂಗಭೂಮಿ ನಟ, ನಿರ್ದೇಶಕ, ಹಾಸ್ಯ ನಾಟಕಗಳ ಮೂಲಕ ಜನಪ್ರಿಯರಾಗಿದ್ದರು. ದೇಶ ವಿದೇಶದಲ್ಲೂ ನಾಟಕ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದರು.
ಹುಬ್ಬಳ್ಳಿಯಲ್ಲಿ ಆದಿರಂಗ ಥೇಟರ್ ಸ್ಥಾಪನೆ ಮಾಡಿ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ವಾಣಿಜ್ಯ ನಗರಿಯಲ್ಲಿ ರಂಗ ಚಟುವಟಿಕೆ ಜೀವಂತ ಇಡುವಲ್ಲಿ ಶ್ರಮಿಸಿದ್ದರು.
ವಿಜಯಪುರ ಜಿಲ್ಲೆಯಲ್ಲಿ 1965ರಲ್ಲಿ ಜನಿಸಿದ ಅವರು ಬಾಲ್ಯದಿಂದಲೇ ನಾಟಕದಲ್ಲಿ ಆಸಕ್ತಿ ಹೊಂದಿದ್ದರು. ಹೆಗ್ಗೋಡಿನ ನಿನಾಸಂ ಸಂಸ್ಥೆಯಲ್ಲಿ ಡಿಪ್ಲೊಮಾ ಪದವಿ ಪಡೆದು, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದಿದ್ದರು.
ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ್ದ ಅವರು, ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ನಾಟಕಗಳನ್ನು ರಂಗಕ್ಕೆ ತಂದಿದ್ದರು.
ಗುರು ಸಂಸ್ಥೆಯ ಮೂಲಕ ಆಲ್ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್ ಮುಂತಾದ ನಗೆ ನಾಟಕಗಳನ್ನು ಪ್ರದರ್ಶಿಸಿ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ್ದರು.
ಇವರು ನಟಿಸಿ ನಿರ್ದೇಶಿಸಿದ್ದ ಆಲ್ ದಿ ಬೆಸ್ಟ್ ನಾಟಕ ರಾಜ್ಯಾದ್ಯಂತ ಅಭೂತಪೂರ್ವ ಯಶಸ್ಸು ಕಂಡಿತ್ತು.
ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಕೆಲವು ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಸಿ ಹೆಚ್ಚು ಜನಪ್ರಿಯರಾದವರು.
ಅವರ ನಿಧನದ ಸುದ್ದಿ ರಂಗಾಸಕ್ತರು, ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ.