ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ಕಳೆದ ವರ್ಷ ತುಂಬಿ ತುಳುಕುತ್ತಿದ್ದ ತಾಲೂಕಿನ ಕೆರೆಗಳು ಈ ಬಾರಿ ಬೇಸಿಗೆ ಆರಂಭದಲ್ಲಿಯೇ ಸಂಪೂರ್ಣ ಬತ್ತಿಹೋಗಿವೆ. ಇನ್ನು ಕೆಲವೆಡೆ ಕೊಳವೆ ಬಾವಿಗಳಲ್ಲಿ ಕೂಡ ನೀರಿನ ಕೊರತೆಯಾಗಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.
ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ.
2022ರಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದು, ನದಿ ಮೂಲದಿಂದ ಕೆರೆಗಳಿಗೆ ನೀರು ಹರಿಸಿದ್ದ ಪರಿಣಾಮ ತಾಲೂಕಿನ ಕೆರೆಗಳು ತುಂಬಿ ತುಳುಕುತ್ತಿದ್ದವು. ನದಿಗಳಿಂದ ನೀರು ಹರಿಸಿದ ಪರಿಣಾಮ ಎರಡು ದಶಕಗಳ ಕಾಲ ನೀರಿಲ್ಲದೆ ಬರಿದಾಗಿದ್ದ ಕಾಡಂಚಿನ ಕೆರೆಗಳು ತುಂಬಿದ್ದವು. ವಡೆಯನಪುರ ಕೆರೆ, ಕಲ್ಲುಕಟ್ಟೆ ಜಲಾಶಯ, ವಿಜಯಪುರ ಅಮಾನಿ ಕೆರೆ, ದೇವಲಾಪುರ ಕೆರೆ, ಹಂಗಳ ದೊಡ್ಡಕೆರೆ, ಕಮರಹಳ್ಳಿ ಕೆರೆ ಮುಂತಾದ ದೊಡ್ಡ ದೊಡ್ಡ ಕೆರೆಗಳು ಕೋಡಿ ಬಿದ್ದು ಗುಂಡ್ಲು ನದಿ ಮಾರ್ಗದಲ್ಲಿ ನೀರು ಹರಿದಿತ್ತು. ಬಫರ್ ವಲಯದ ಸ್ಕಂದಗಿರಿ ಪಾರ್ವತಾಂಬಾ ಬೆಟ್ಟಕ್ಕೆ ಬಿದ್ದ ಮಳೆಯಿಂದ ಮೂರು ದಶಕಗಳ ಹಿಂದೆ ಬತ್ತಿಹೋಗಿದ್ದ ಅಂತರ ಗಂಗೆಯಲ್ಲಿ ನೀರು ಹರಿದು ಹೊಸದಾಗಿ ನಿರ್ಮಿಸಿದ್ದ ಚೆಕ್ ಡ್ಯಾಂ ಕೋಡಿ ಬಿದ್ದಿತ್ತು. ಇದರಿಂದ ತಾಲೂಕಿನ ಶೇ.90 ರಷ್ಟು ಕೆರೆಗಳು ಕೋಡಿ ಬಿದ್ದಿದ್ದವು.
ಅಲ್ಲದೆ, ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಲ್ಲಿ ಬೇಗೂರು ಹಾಗೂ ತೆರಕಣಾಂಬಿ ಹೋಬಳಿಯ ಕೆರೆಗಳು ತುಂಬಿಹರಿದಿದ್ದವು. ಇದರಿಂದ ಪಾತಾಳಕ್ಕೆ ಇಳಿದಿದ್ದ ಅಂತರ್ಜಲ ಮಟ್ಟ ಏರಿಕೆಯಾಗಿತ್ತು. ಸಾವಿರಾರು ಅಡಿ ಬೋರ್ ಕೊರೆಸಿದರೂ ನೀರು ಸಿಗದ ಕಡೆಗಳಲ್ಲಿ ಕೂಡ ನೀರು ಬಂದಿತ್ತು. ನೀರು ಸಿಗದೆ ವಿಫಲವಾಗಿದ್ದ ಕೊಳವೆಬಾವಿಗಳಲ್ಲಿ ಕೂಡ ನೀರು ಉಕ್ಕಿ ಹರಿದಿತ್ತು. ಅನೇಕ ರೈತರು ಕೈಬಿಟ್ಟಿದ್ದ ಕೃಷಿಯನ್ನು ಮರು ಆರಂಭಿಸಿದ್ದರು.
ಹಿಂದಿನ ಶಾಸಕ ಸಿ.ಎಸ್.ನಿರಂಜನಕುಮಾರ್ ತಾಲೂಕಿನ 110 ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯ ಡಿಪಿಆರ್ ಮಾಡಿಸಿದ್ದರು. ಆದರೆ, ಸರ್ಕಾರ ಅನುದಾನ ಮೀಸಲಿಡದ ಪರಿಣಾಮ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ.
ಆದರೆ, ಈ ಬಾರಿಯ ಮುಂಗಾರು ಹಾಗೂ ಹಿಂಗಾರಿನಲ್ಲಿ ಮಳೆಯ ಕೊರತೆಯಾದ ಪರಿಣಾಮ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಹಂಗಳ ಹೋಬಳಿಯ ಪ್ರಮುಖ ಅಂತರ್ಜಲ ಮೂಲವಾಗಿರುವ ಗುಂಡ್ಲು ನದಿಯ ಉಗಮತಾಣವೂ ಆದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಹಿರೀಕೆರೆ ಸಂಪೂರ್ಣ ಬತ್ತಿಹೋಗಿದೆ. ಕಲಿಗೌಡನಹಳ್ಳಿ ಕೆರೆ, ಕಲ್ಲುಕಟ್ಟೆ ಜಲಾಶಯ ಹಾಗೂ ವಡೆಯನಪುರ ಕೆರೆಗಳ ಸಣ್ಣಪುಟ್ಟ ಗುಂಡಿಗಳಲ್ಲಿ ಮಾತ್ರ ನೀರು ನಿಂತಿದೆ.
ಬೇಗೂರು ಹೋಬಳಿಯ ಕೆರೆಗಳಿಗೆ ಗಾಂಧಿಗ್ರಾಮ ಏತ ನೀರಾವರಿ ಯೋಜನೆಯಲ್ಲಿ ನೀರು ತುಂಬಿಸಲಾಗುತ್ತಿರುವುದರಿಂದ ಬೆಳಚಲವಾಡಿ ಕೆರೆ ತುಂಬಿದ ನೀರು ಕಮರಹಳ್ಳಿ ಕೆರೆಯತ್ತ ಹರಿಯುತ್ತಿದೆ. ಆದರೆ ತೆರಕಣಾಂಬಿ ಹಾಗೂ ಹಂಗಳ ಹೋಬಳಿಯ ಬಹುತೇಕ ಕೆರೆಗಳು ನೀರಿಲ್ಲದೆ ಬತ್ತಿಹೋಗಿರುವುದರಿಂದ ಕಂದೇಗಾಲ, ಶಿಂಡನಪುರ, ತ್ರಿಯಂಭಕಪುರ, ಬೆಟ್ಟಹಳ್ಳಿ ಮುಂತಾದ ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಇದರಿಂದ ಬೇಸಿಗೆಯ ಆರಂಭದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟದ ನಿರ್ವಹಣೆಗೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.