ಮಂಜುನಾಥ ತಿಮ್ಮಯ್ಯ ಮೈಸೂರು
ಸ್ವಚ್ಛ ನಗರಿ ಹಿರಿಮೆ ಹೊಂದಿರುವ ಮೈಸೂರಿನ ಹೊರವಲಯದ ಕೆರೆಗಳು ಒಳಚರಂಡಿ ನೀರಿನ ಸಂಗ್ರಹಾಲಯಗಳಾಗಿ ಪರಿವರ್ತನೆಗೊಂಡಿವೆ. ಇದು ಸಾಂಸ್ಕೃತಿಕ ನಗರಿಗೆ ಕಪ್ಪು ಚುಕ್ಕೆ ಎನಿಸಿವೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಎಗ್ಗಿಲ್ಲದೆ ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ತಾನೂ ಸಹ ಬಡಾವಣೆ ನಿರ್ಮಿಸಿದೆ. ಆದರೆ, ಒಳಚರಂಡಿ ವ್ಯವಸ್ಥೆಗೆ ನೀಲನಕ್ಷೆ ರೂಪಿಸಿ ಕೈತೊಳೆದುಕೊಂಡಿದೆ. ಇದರಿಂದ ಕೆರೆಗಳು ಒಳಚರಂಡಿ ನೀರು ನಿಲ್ಲುವ ಸ್ಥಳವಾಗಿವೆ.
ಇದು ಜಲಚರಗಳಿಗೆ ಕಂಟಕವಾದರೆ, ಅನೈರ್ಮಲ್ಯ, ಪರಿಸರ ಹಾಳು ಮಾಡುವುದರೊಂದಿಗೆ ಜಲಮೂಲವನ್ನೂ ಕಲುಷಿತಗೊಳಿಸುತ್ತಿರುವುದು ಆಘಾತಕಾರಿ. ಕೆರೆಗಳೊಂದಿಗೆ ಕಟ್ಟೆಗಳೂ ಕಲುಷಿತಗೊಂಡಿವೆ.
ರಿಂಗ್‌ರೋಡ್ ಹೊರಭಾಗದ ಕೆರೆಗಳೇ ಹೆಚ್ಚು ಮಲೀನಗೊಂಡಿವೆ. ಪೊಲೀಸ್ ಬಡಾವಣೆ, ಗಿರಿದರ್ಶಿನಿ ಬಡಾವಣೆ, ಆಲನಹಳ್ಳಿಯ ಒಳಚರಂಡಿ ನೀರು ರಾಜಕಾಲುವೆಯ ಮೂಲಕ ತಿಪ್ಪಯ್ಯನ ಕೆರೆಯನ್ನು ಸೇರುತ್ತಿದೆ. ಜತೆಗೆ, ಕೆರೆ ಸಮೀಪದಲ್ಲೇ ಮ್ಯಾನ್‌ಹೋಲ್‌ಗಳ ಬಾಯಿ ತೆರೆದಿವೆ. ಹಂದಿಗಳ ಆವಾಸ ತಾಣವಾಗಿ ಗಬ್ಬು ನಾರುತ್ತಿದೆ. ಈ ಕೆರೆಯು ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದ್ದು, ಅದು ಏನು ಕೆಲಸ ಮಾಡುತ್ತಿಲ್ಲ. ಆದರೆ, ಸುತ್ತಲಿನ ಬಡಾವಣೆಯ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ.
ಮೃಗಾಲಯ ಪ್ರಾಧಿಕಾರವು ಕೆರೆ ನಿರ್ವಹಣೆ ಜವಾಬ್ದಾರಿಯನ್ನು ಮುಡಾ ಅಧೀನಕ್ಕೆ ಒಳಪಡಿಸಿದ್ದರೆ ಸಮಗ್ರ ಅಭಿವೃದ್ಧಿ ಮಾಡಲಾಗುವುದು. 20 ವರ್ಷದ ಹಿಂದೆ ಅಭಿವೃದ್ಧಿ ಪಡಿಸಿದ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕ ಮಾಡಿಲ್ಲ. ಅವುಗಳ ದುರಸ್ತಿ ಮಾಡಲು ಡೆವಲಪರ್‌ಗಳಿಗೆ ಸೂಚಿಸಲಾಗಿದೆ. ಆದರೆ, ಅವರು ಮಾಡಲು ಸಾಧ್ಯವೇ? ಇದನ್ನು ಮುಡಾ ಮೇಲುಸ್ತುವಾರಿ ಮಾಡಲಿದೆಯೇ…? ಎಂಬ ಪ್ರಶ್ನೆ ಮೂಡಿದೆ.
ಮೈಸೂರು ನಗರದಿಂದ 20 ಕಿ.ಮೀ. ದೂರದಲ್ಲಿರುವ ವರುಣ ಕೆರೆಯದ್ದೂ ಇದೇ ವ್ಯಥೆ. ಇಲ್ಲಿ ನಡೆಯುವ ಸಾಹಕ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ಮಲೀನ ನೀರಿನ ಮಜ್ಜನವಾಗುತ್ತಿದೆ. ಈ ಕೆರೆಗೆ ವಸಂತನಗರ, ನಾಡನಹಳ್ಳಿ, ಕೆ.ಬಿ.ಎಲ್.ಬಡಾವಣೆ, ಭೂಗತಗಳ್ಳಿ, ಚಿಕ್ಕಹಳ್ಳಿ, ವಾಜಮಂಗಲ ಬಡಾವಣೆಗಳ ಒಳಚರಂಡಿಯ ನೀರು ಹರಿದು ಬರುತ್ತಿದೆ.
ಅಲ್ಲದೆ, ಶೆಟ್ಟಿಕೆರೆ, ವರಕೋಡು, ಸಿಂಧುವಳ್ಳಿ, ಕಾಮನಕೆರೆ ಹುಂಡಿಯ ದೊಡ್ಡಕೆರೆಗೂ ಈ ಸಮಸ್ಯೆಯೇ ಅಂಟಿಕೊಂಡಿದೆ. ಇವುಗಳಿಗೆ ಹೊಸ ಬಡಾವಣೆಗಳಿಗೆ ಚರಂಡಿ ನೀರು ಸೇರುತ್ತಿದೆ. ದಳವಾಯಿ ಕೆರೆಗೆ ಸೂವೇಜ್ ಫಾರಂನಿಂದ ಬರುವ ಕೊಳಚೆನೀರು ಸೇರ್ಪಡೆಯಾಗುತ್ತಿದೆ.
ವಾಯುವಿಹಾರಿಗಳ, ಪ್ರವಾಸಿ ತಾಣವಾಗಿರುವ ಕುಕ್ಕರಹಳ್ಳಿ ಕೆರೆಗೆ ಬರುತ್ತಿರುವ ಚರಂಡಿ ನೀರನ್ನು ತಡೆಯುವ ಪರಿಣಾಮಕಾರಿ ಕೆಲಸ ಇನ್ನೂ ಆಗಿಲ್ಲ. ಬೋಗಾದಿ ಕೆರೆಯಲ್ಲಿ ಕಟ್ಟಡ ತ್ಯಾಜ್ಯ ಹಾಕಿ ಮುಚ್ಚಲಾಗುತ್ತಿದೆ. ಲಿಂಗಾಂಬುದ್ಧಿ ಕೆರೆಗೆ ರಾಮಕೃಷ್ಣನಗರ, ವಿವೇಕಾನಂದ ನಗರದಿಂದ ಬರುತ್ತಿರುವ ಒಳಚರಂಡಿ ನೀರನ್ನು ತಡೆಯಲು ಸಾಧ್ಯವಾಗಿಲ್ಲ. ಪುನರುಜ್ಜೀವನಗೊಂಡಿರುವ ಕೇರ್ಗಳ್ಳಿ ಕೆರೆ, ದಟ್ಟಗಳ್ಳಿ ಸಮೀಪದ ಅಯ್ಯಜ್ಜನಹುಂಡಿ ಕೆರೆಗಳಿಗೂ ಒಳಚರಂಡಿ ನೀರು ಕಂಟಕವಾಗಿದೆ.
ಪುನಶ್ಚೇತನಗೊಂಡಿರುವ ಹೆಬ್ಬಾಳ ಕೆರೆಗೆ ಒಳಚರಂಡಿ ನೀರನ್ನು ಶುದ್ಧೀಕರಣ ಮಾಡಿ ಬಿಡಲಾಗುತ್ತಿದೆ. ಜಲಚರಗಳು ಹಾಗೂ ಪಕ್ಷಿಸಂಕುಲಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗಿದೆ. ಜತೆಗೆ, ಸೌಂದರ್ಯಕರಣಗೊಳಿಸಿ ವಾಯುವಿಹಾರಕ್ಕೂ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೀಗ ಇದು ಸಹ ನಿರ್ವಹಣೆ ಕೊರತೆಯಿಂದ ಮೊದಲ ದುಸ್ಥಿತಿಯತ್ತ ಮುಖ ಮಾಡಿದೆ.
ಹೀಗೆ ನಗರ ಹೊರಭಾಗದ ಈ ಎಲ್ಲ ಕೆರೆಗಳಿಗೆ ಮಳೆ ನೀರು ಸೇರುವುದು ಕಡಿಮೆಯಾಗಿದೆ. ಬರೀ ಕಳೆ ಆವರಿಸಿಕೊಂಡಿದೆ. ಅಲ್ಲಿದ್ದ ಮೀನುಗಳು ಸಾಯಿತ್ತಿವೆ. ಜಲಚರಗಳು ಕಡಿಮೆಯಾಗಿವೆ. ಪಕ್ಷಿಗಳು ದಿಕ್ಕು ಬದಲಿಸಿವೆ.
ಮೈಸೂರು ನಗರದ ಹೊರ ವಲಯವು ಯೋಜನಾಬದ್ಧವಾಗಿ ನಿರ್ಮಾಣವಾಗುತ್ತಿಲ್ಲ. ಬಡಾವಣೆಗೆ ಅನುಮೋದನೆ ನೀಡಿ ಮುಡಾ ಕೈಚೆಲ್ಲುತ್ತಿದೆ. ಬಳಿಕ ನಿರ್ವಹಣೆ ಮಾಡುತ್ತಿಲ್ಲ. ಪಾಲಿಕೆ, ಮುಡಾ, ನಗರ ಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ನಡುವಿನ ಹೊಣೆಗಾರಿಕೆ ಗುದ್ದಾಟದಲ್ಲೇ ಇವುಗಳೆಲ್ಲ ನಿರ್ವಹಣೆವಿಲ್ಲದೆ ಸೊರಗಿವೆ.
ಕೆರೆಯ ನೀರು ಬಳಕೆಯಾಗುತ್ತಿದ್ದರೆ ಸಮಸ್ಯೆ ಆಗಲ್ಲ. ಈ ಕೆರೆಗಳ ನೀರನ್ನು ಮೊದಲು ಕೃಷಿಗೆ ಉಪಯೋಗವಾಗುತ್ತಿದ್ದವು. ಈಗ ಚರಂಡಿ ನೀರು ಸೇರುವ ಪ್ರಮಾಣ ಹೆಚ್ಚಾಗಿ ಕೆರೆಗೆ ಮಳೆ ನೀರಿನ ಹರಿವು ತಗ್ಗಿದೆ. ಇದು ಹೀಗೆ ಮುಂದುವರಿದರೆ ಕೆರೆಗಳು ಮಾಲಿನ್ಯ ತಾಣಗಳಾಗಲಿವೆ ಎಂದು ಪರಿಸರವಾದಿಗಳ ಆತಂಕವಾಗಿದೆ.
ನಗರದ ಎಲ್ಲ ಕೆರೆಗಳಿಗೆ ನಿರ್ವಹಣೆ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಒಳಚರಂಡಿ ನೀರು ಸೇರುವುದನ್ನ ತಡೆದು ಕೆರೆಗಳನ್ನು ಉಳಿಸಬೇಕು ಎಂಬುದು ಸಾರ್ವಜನಿಕರ, ಪರಿಸವಾದಿಗಳ ಒತ್ತಾಯವಾಗಿದೆ
‘ತಿಪ್ಪಯ್ಯನಕೆರೆಗೆ ಕಲುಷಿತ ನೀರು ಸೇರುತ್ತಿದೆ. ಇದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸ್ವಾಧೀನದಲ್ಲಿ ಇದೆ. ಪೊಲೀಸ್ ಬಡಾವಣೆ ಸೇರಿದಂತೆ ಸುತ್ತಲಿನ ಬಡಾವಣೆಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಸಮಸ್ಯೆ ನಿವಾರಣೆಗಾಗಿ 12.60 ಕೋಟಿ ರೂ.ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ವರುಣ ಕೆರೆ ಸೇರುತ್ತಿರುವ ಒಳಚರಂಡಿ ನೀರನ್ನು ತಡೆಯಲು 30.88 ಕೋಟಿ ರೂ.ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಈ ಎರಡು ಕಡೆ ಮಲೀನ ನೀರು ಶುದ್ಧೀಕರಣ ಘಟಕ ನಿರ್ಮಾಣ ಇನ್ನಿತರ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದರು.
ನಗರ ಹೊರವಲಯದ ಕೆರೆಗಳಿಗೆ ಒಳಚರಂಡಿಯ ಕಲುಷಿತ ನೀರು ಸೇರುತ್ತಿದ್ದು, ಇದನ್ನು ತಡೆಯಲು 43.48 ಕೋಟಿ ರೂ.ವೆಚ್ಚ ಎರಡು ಪ್ರತ್ಯೇಕ ಕ್ರಿಯಾಯೋಜನೆ ತಯಾರಿಸಲಾಗಿದೆ. ಸರ್ಕಾರದ ಅನುಮೋದನೆ ಬಾಕಿ ಇದೆ.ಕೆ.ಮರೀಗೌಡಅಧ್ಯಕ್ಷ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ