ಜಿಲ್ಲೆ

ರಸ್ತೆಯಲ್ಲಿ ಧೂಳಿನ ಸಿಂಚನ, ಪದವಿನಂಗಡಿ ಒಳಚರಂಡಿ ಅಗೆತ ತಂದಿಟ್ಟ ಸಮಸ್ಯೆ

Dakshina Kannada

ಮಂಗಳೂರು: ಮನೆ, ಅಂಗಡಿಯ ಕಿಟಕಿ, ಬಾಗಿಲು ತೆರೆಯುವಂತಿಲ್ಲ, ಹೊರಗೆ ಕುಳಿತುಕೊಳ್ಳುವಂತಿಲ್ಲ, ರಸ್ತೆಯಲ್ಲಿ ನಡೆದುಕೊಂಡು ಹೋಗುವಂತಿಲ್ಲ, ಯಾವುದೇ ವಸ್ತು ಹೊರಗೆ ಇಡುವಂತಿಲ್ಲ. ಧೂಳು, ಧೂಳು, ಧೂಳು.... ಇದು ಪದವಿನಂಗಡಿಯ ಸೂಪರ್ ಮಾರ್ಕೆಟ್ ಎದುರಿನಿಂದಾಗಿ ಶ್ರೀ ಮಹಾಲಸಾ ನಾರಾಯಣಿ ದೇವಳದ ಮುಂಭಾಗ ಸಾಗುವ ರಸ್ತೆ ಬದಿ ವಾಸ ಮಾಡುವವರ ಸ್ಥಿತಿ. ಮಳೆಗಾಲದಲ್ಲಿ ಒಳಚರಂಡಿ ಅಳವಡಿಸಲು ಡಾಂಬರು ರಸ್ತೆಯನ್ನು ಅಗೆದು, ಕಾಮಗಾರಿ ಮುಗಿದ ಬಳಿಕ ಮಣ್ಣು ಹಾಕಿ ಮುಚ್ಚಿರುವಲ್ಲಿ ವಾಹನಗಳು ಸಂಚರಿಸುವಾಗ ದಟ್ಟ ಧೂಳು ಹಾರುತ್ತಿದೆ.

ಇಲ್ಲಿ ಅಪಾರ್ಟ್‌ಮೆಂಟ್‌ಗಳು, 50ಕ್ಕೂ ಅಧಿಕ ಮನೆಗಳು, ಅಂಗಡಿಗಳಿವೆ. ಈ ಮನೆಗಳಲ್ಲಿ ಹಿರಿಯರು, ಮಕ್ಕಳು ವಾಸವಿದ್ದು, ನಿರಂತರ ಧೂಳು ಮಿಶ್ರಿತ ಗಾಳಿ ಸೇವಿಸುವಂತಾಗಿದೆ. ಆರೋಗ್ಯ ಸಮಸ್ಯೆ ಹೊಂದಿರುವವರು ಪರದಾಡುವ ಸ್ಥಿತಿ ಎದುರಾಗಿದೆ.

ಕಿಟಕಿ ಮುಚ್ಚಿಡಬೇಕಾದ ಸ್ಥಿತಿ: ಬೊಲ್ಪುಗುಡ್ಡೆ, ಅಬಕಾರಿ ಕಚೇರಿ, ಗೃಹರಕ್ಷಕದಳ ಕಚೇರಿ, ಮೇರಿಹಿಲ್, ಕಾವೂರು ದೇವಸ್ಥಾನದ ಕಡೆಗೆ ಹೋಗುವವರು ಇದೇ ರಸ್ತೆಯಿಂದ ಸಂಚರಿಸುತ್ತಾರೆ. ನಿರಂತರವಾಗಿ ವಾಹನಗಳು ಹೋಗುತ್ತಲೇ ಇರುವುದರಿಂದ 24 ಗಂಟೆಯೂ ಮನೆಯ ಕಿಟಕಿ ಬಾಗಿಲು ಹಾಕಿಕೊಂಡೇ ಇರಬೇಕಾದ ಸ್ಥಿತಿ ಇದೆ. ಮನೆಯಿಂದ ಹೊರಗೆ ಬಂದು ಬಾಲ್ಕನಿಗಳಲ್ಲಿ ಕುಳಿತುಕೊಂಡರೆ ಧೂಳು ತಿನ್ನುವುದು ಖಚಿತ.

ಡಾಂಬರು ಅಳವಡಿಸಿಲ್ಲ: ಮಳೆಗಾಲದಲ್ಲಿ ಒಳಚರಂಡಿಗೆ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಆ ಸಂದರ್ಭ ರಸ್ತೆ ಕೆಸರಿನಿಂದ ತುಂಬಿ ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳೀಯರು ಅಭಿವೃದ್ಧಿ ಕಾಮಗಾರಿಗೆ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಆ ಸಂದರ್ಭ ಡಾಂಬರು ಹಾಕಿಸಿಕೊಡುವ ಭರವಸೆ ಜನಪ್ರತಿನಿಧಿಗಳಿಂದ ಲಭ್ಯವಾಗಿತ್ತು. ಆದರೆ ಕಾಮಗಾರಿ ಮುಗಿದು ಐದಾರು ತಿಂಗಳಾದರೂ ಡಾಂಬರು ಹಾಕುವ ಗೋಜಿಗೆ ಹೋಗಿಲ್ಲ.

ರಸ್ತೆ ಬದಿಯಲ್ಲೇ ನಮ್ಮ ಬೇಕರಿಯಿದ್ದು, ದಿನವಿಡೀ ಧೂಳು ಬರುವುದರಿಂದ ತೊಂದರೆಯಾಗುತ್ತಿದೆ. ಇಲ್ಲಿ ಅಪಾರ್ಟ್‌ಮೆಂಟ್ ಇದ್ದು ಹಲವಾರು ಕುಟುಂಬಗಳು ವಾಸಿಸುತ್ತಿವೆ. ಎಲ್ಲರೂ ಧೂಳು ತಿನ್ನುವ ಪರಿಸ್ಥಿತಿ ಇದೆ. ಮಹಾನಗರ ಪಾಲಿಕೆ ಆದಷ್ಟು ಶೀಘ್ರ ಸ್ಪಂದಿಸಿ ತಾತ್ಕಾಲಿಕ ಡಾಂಬರು ಹಾಕಿಸಿಕೊಡುವಂತೆ ಮನವಿ ಮಾಡುತ್ತೇವೆ. - ಪುಷ್ಪರಾಜ ಶೆಟ್ಟಿ, ಅಂಗಡಿ ಮಾಲೀಕ ಮುಖ್ಯ ರಸ್ತೆಯಿಂದ ಮಹಾಲಸಾ ದೇವಳದ ಮೂಲಕ ಮೇರಿಹಿಲ್‌ಗೆ ಸೇರುವ ಒಳ ರಸ್ತೆ 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣವಾಗಲಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 40 ಲಕ್ಷ ರೂ. ಈಗಾಗಲೇ ಮಂಜೂರಾಗಿ, ಟೆಂಡರ್ ಆಗಿದೆ. ರಾಜೀವ್ ಗಾಂಧಿ ನಗರ ವಿಕಾಸ ಯೋಜನೆಯಡಿ 1.5 ಕೋಟಿ ರೂ. ಬಿಡುಗಡೆಗೆ ಅಂದಾಜುಪಟ್ಟಿ ತಯಾರಿಸಲಾಗುತ್ತಿದೆ. ಶೀಘ್ರ ಕಾಂಕ್ರಿಟೀಕರಣ ಕಾಮಗಾರಿ ಆರಂಭಗೊಳ್ಳಲಿದೆ. - ಸಂಗೀತಾ ಆರ್.ನಾಯಕ್, ಮನಪಾ ಸದಸ್ಯೆ