ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಶಹರ ಪ್ರದೇಶಗಳ ಒಳಚರಂಡಿ ಯೋಜನೆಗಳು ಅವ್ಯವಸ್ಥೆಯ ಆಗರಗಳಾಗಿವೆ. ಅಸಮರ್ಪಕ ಯೋಜನೆ, ನಿರ್ವಹಣೆಗಳಿಂದ ನಗರಗಳಲ್ಲಿ ನರಕ ಸೃಷ್ಟಿಯಾಗಿದೆ. ಜನರ ವಿರೋಧಗಳಿಂದ ಕೆಲವು ಕಾಮಗಾರಿಗಳು ಅರ್ಧಕ್ಕೇ ನಿಂತಿದ್ದು, ಸರ್ಕಾರದ ಹಣ ಪೋಲಾಗುತ್ತಿದೆ.
ಕುಮಟಾ, ಹೊನ್ನಾವರದಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭವಾಗಿ ದಶಕ ಕಳೆದು ಹೋಗಿದೆ. ಯೋಜನೆ ಅರ್ಧಕ್ಕೇ ನಿಂತು ಹಿಂದೆ ಮಾಡಿದ ಖರ್ಚು ರಸ್ತೆಗಳಡಿ ಮಾಯವಾಗಿದೆ!
ಕಾರವಾರದಲ್ಲಿ ಎರಡು ದಶಕಗಳ ಹಿಂದೆ ನಿರ್ವಣವಾದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಜನರಿಗೆ ಅನುಕೂಲಕ್ಕಿಂತ ಸಂಕಷ್ಟವೇ ಹೆಚ್ಚು ಎಂಬ ಪರಿಸ್ಥಿತಿ ಇದೆ. ಹೊಸ ಒಳಚರಂಡಿ ಯೋಜನೆ ಪ್ರಸ್ತಾವ ಅನುಮೋದನೆಗೆ ಕಾಯುತ್ತಿದೆ.
ಹಳಿಯಾಳ, ಭಟ್ಕಳ, ಜಾಲಿಯಲ್ಲಿ ಒಳಚರಂಡಿ ಕಾಮಗಾರಿಗಳು 2019ರಲ್ಲಿ ಶುರುವಾಗಿದ್ದು, ನಿಧಾನಗತಿಯಲ್ಲಿ ಸಾಗಿವೆ. ಒಟ್ಟಾರೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳು ವಿಭಿನ್ನ ಸ್ವರೂಪದ ಸಮಸ್ಯೆಗಳಿಂದ ಬಳಲುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಒಳಚರಂಡಿಯ ಇಂಥ ಅವ್ಯವಸ್ಥೆಗಳ ಕುರಿತು ‘ವಿಜಯವಾಣಿ’ ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ.
ಎನ್ಜಿಟಿ ಪಟ್ಟು
ನಗರ ನೈರ್ಮಲ್ಯದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಬಹಳ ಒತ್ತು ನೀಡಿದೆ. ನಗರದ ಶೌಚದ ತ್ಯಾಜ್ಯಗಳು ನೀರಿನ ಮೂಲಗಳು ಮತ್ತು ಕುಡಿಯುವ ನೀರಿಗೆ ಸೇರಿ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಸೂಚಿಸಿದೆ. ಎಲ್ಲ ಶಹರ ಮಾತ್ರವಲ್ಲ, ಹೆಚ್ಚು ಜನಸಂಖ್ಯೆಗಳಿರುವ ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದೆ. ಶೌಚದ ನೀರು ನದಿಗಳು, ಸಮುದ್ರ ಸೇರುವುದನ್ನು ತಡೆಯಲು ಸರ್ಕಾರಗಳಿಗೆ ನಿರ್ದೇಶಿಸಿದೆ. ಮಾತ್ರವಲ್ಲ, ಕ್ರಮ ಜರುಗಿಸಲು ಪ್ರತಿ ಜಿಲ್ಲಾ ಮಟ್ಟದಲ್ಲಿ ಕಾರ್ಯ ಪಡೆ ರಚಿಸುವಂತೆ ಸೂಚಿಸಿದೆ. ಪ್ರತಿ 3 ತಿಂಗಳಿಗೊಮ್ಮೆ ವರದಿ ಕೇಳುತ್ತಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಕೈಗೊಳ್ಳದಿರುವುದಕ್ಕೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಂಡ ಆಕರಿಸಲು ಆದೇಶಿಸಿದೆ.
ಎಲ್ಲ ಕಠಿಣ ನಿಯಮ, ಕ್ರಮಗಳಿಂದ ವಿವಿಧೆಡೆ ಒಳಚರಂಡಿ ಯೋಜನೆಗಳು ರೂಪುಗೊಂಡು ಕಾಮಗಾರಿ ಪ್ರಾರಂಭವಾಯಿತು. ಆದರೆ, ಅದನ್ನು ಜನಪ್ರತಿನಿಧಿಗಳು ಸರಿಯಾಗಿ ಮೇಲುಸ್ತುವಾರಿ ಮಾಡದ ಕಾರಣ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆಗಳು ಹಳ್ಳ ಹಿಡಿದಿರುವುದರಿಂದ ಕಾರ್ಯಾಂಗ ಮತ್ತು ಶಾಸಕಾಂಗದ ಕಾಳಜಿ ಏನೆಂದು ನೇರವಾಗಿ ಪ್ರಶ್ನಿಸುವಂತಾಗಿದೆ.
ದಾಂಡೇಲಿಯಲ್ಲಿ ಮುಕ್ತಾಯ
ಜಿಲ್ಲೆಯಲ್ಲಿ 2019ರಲ್ಲಿ ಪ್ರಾರಂಭವಾದ ನಾಲ್ಕು ಒಳಚರಂಡಿ ಕಾಮಗಾರಿಗಳ ಪೈಕಿ ದಾಂಡೇಲಿಯ ಯೋಜನೆ ಮಾತ್ರ ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಒಳಚರಂಡಿ ವ್ಯವಸ್ಥೆಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಮನೆ ಮನೆ ಸಂಪರ್ಕ ಮಾತ್ರ ಬಾಕಿ ಇದೆ. ಉಳಿದ ಎಲ್ಲೆಡೆ ಕಾಮಗಾರಿಗಳು ಕುಂಟುತ್ತ ಸಾಗಿವೆ.
ರಸ್ತೆಯೆಲ್ಲ ಹಾಳು
ಒಳಚರಂಡಿ ಯೋಜನೆ ಹಾಗೂ ಶಹರಗಳಲ್ಲಿ ಕೈಗೊಳ್ಳುವ ಇತರ ಯೋಜನೆಗಳಿಗೆ ತಾಳ ಮೇಳ ಇಲ್ಲದಂತಾಗಿದೆ. ಪೂರ್ವ ಯೋಜನೆ, ಮುಂದಾಲೋಚನೆ ಹಾಗೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಒಳಚರಂಡಿಯ ಮ್ಯಾನ್ಹೋಲ್, ಪೈಪ್ಲೈನ್ ಅಳವಡಿಕೆಗಾಗಿ ಇತ್ತೀಚೆಗೆ ಮಾಡಿದ ರಸ್ತೆಗಳನ್ನು ಅಗೆದು ಹಾಕಲಾಗುತ್ತಿದೆ. ಇದರಿಂದ ಜನರ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ.
ಒಳಚರಂಡಿ ವ್ಯವಸ್ಥೆ ಕೈಗೊಳ್ಳಲು ಹಲವೆಡೆ ಸೂಕ್ತ ಜಾಗದ ಸಮಸ್ಯೆ ಇದೆ. ಇದರಿಂದ ಕೆಲವೆಡೆ ಯೋಜನೆಗಳ ಜಾರಿ ವಿಳಂಬವಾಗಿದೆ. ಕೆಲವೆಡೆ ಜಾಗದ ವಿಚಾರ ನ್ಯಾಯಾಲಯದಲ್ಲಿದೆ. | ಸದಾನಂದ ಬಾಂದೇಕರ್ ಎಇಇ, ಕೆಯುಡಬ್ಲ್ಯುಎಸ್ಎಸ್ಬಿ ಕಾರವಾರ