ಮದ್ದೂರು: ಮದ್ದೂರಮ್ಮನ ಕೆರೆಯಿಂದ ತೆಂಗಿನ ಬೆಳೆಗೆ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಕಟ್ಟು ನೀರು ಹರಿಸಬೇಕೆಂದು ಒತ್ತಾಯಿಸಿ ಮದ್ದೂರು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತೆಂಗಿನ ಬೆಳೆಗೆ ಸಮರ್ಪಕವಾಗಿ ನೀರು ಹರಿಸದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ನ.ಲಿ.ಕೃಷ್ಣ ಮಾತನಾಡಿ, ಮದ್ದೂರಮ್ಮನ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿರುವುದರಿಂದ ತೆಂಗಿನ ಬೆಳೆಗೆ ನೀರನ್ನು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು. ನೀರಿನ ಸಮಸ್ಯೆ ಜತೆಗೆ, ತೆಂಗಿನ ಬೆಳೆಗೆ ಕಪ್ಪುತಲೆ ಹುಳುಗಳ ಬಾಧೆ ಇದೆ. ನೀರಿಲ್ಲದೆ ಮರಗಳು ಸೊರಗುತ್ತಿವೆ. ಕನಿಷ್ಠ ತಿಂಗಳಿಗೊಮ್ಮೆ ನೀರು ನೀಡಿ ಮರಗಳನ್ನು ಉಳಿಸಿಕೊಳ್ಳಬೇಕಾಗಿದೆ. ನೀರು ನೀಡದಿದ್ದರೆ ಮತ್ತೆ 3 ವರ್ಷಗಳ ಕಾಲ ತೆಂಗಿನ ಮರಗಳ ಫಸಲು ಬರಲು ಸಮಯ ಹಿಡಿದು ರೈತರ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮದ್ದೂರಮ್ಮ ಕೆರೆಯಿಂದ ಕೆಮ್ಮಣ್ಣು ನಾಲೆ, ಬೈರನ್ ನಾಲೆ, ಚಾಮನಹಳ್ಳಿ ನಾಲೆಗಳಿಗೆ ಕೂಡಲೇ ನೀರು ಹರಿಸಲು ಕ್ರಮವಹಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ ದೂರವಾಣಿ ಮೂಲಕ ಮಾತನಾಡಿ, ನಾನು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿದ್ದು, ಗುರುವಾರ ಕೆಮ್ಮಣ್ಣು ನಾಲೆಯ ಬಳಿ ಆಗಮಿಸಿ ರೈತರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಮುಖಂಡರಾದ ಶಿವಲಿಂಗೇಗೌಡ, ಸದಾನಂದ, ಧನಂಜಯ, ರಾಮಲಿಂಗಯ್ಯ, ಶಿವಲಿಂಗಯ್ಯ, ನಿಂಗೇಗೌಡ, ಪ್ರಕಾಶ, ನಿಂಗಪ್ಪ, ಗೋಪಾಲ, ರಾಮಕೃಷ್ಣ, ರಮೇಶ, ಮರಿಲಿಂಗೇಗೌಡ, ಮಂಚಯ್ಯ, ರಾಕೇಶ್‌ಗೌಡ, ಶಿವಲಿಂಗಯ್ಯ, ಮರಲಿಂಗಯ್ಯ ಇದ್ದರು.