ಜಿಲ್ಲೆ

ನೀರು ಹರಿಸಿ ರೈತರ ಹಿತ ಕಾಯಿರಿ: ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ: ಯಾವುದೇ ಮುನ್ಸೂಚನೆ ನೀಡದೆ ಭದ್ರಾ ನಾಲೆ ನೀರನ್ನು ನಿಲ್ಲಿಸಿರುವುದು ಖಂಡನೀಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸರ್ಕಾರ ನೂರು ದಿನ ನೀರು ಬಿಡುತ್ತದೆ ಎಂಬ ವಿಶ್ವಾಸದ ಮೇಲೆ ರೈತರು ಭತ್ತ ನಾಟಿ ಮಾಡಿದ್ದರು. ಈ ಬಗ್ಗೆ ನಾವು ಕೂಡ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ನೀರನ್ನು ನಿಲ್ಲಿಸದೆ ಕೊಡಿ ಕನಿಷ್ಟ ಭತ್ತದ ಬೇರುಗಳು ನೆಲಕ್ಕಿಳಿಯಲಿ ಎಂದು ಮನವಿ ಮಾಡಿದ್ದೆ. ಆದರೆ ರೈತರು ಬೆಳೆಯುತ್ತಿರುವ ಭತ್ತದ ಬೆಳೆಗಳಿಗೆ ನೀರು ಕೊಡದೆ ನಿಲ್ಲಿಸಿದ್ದೀರಿ, ಕೂಡಲೇ ನೀರನ್ನು ಹರಿಸಿ ರೈತರ ಹಿತ ಕಾಯಬೇಕು. ಇಲ್ಲದಿದ್ದರೆ ರೈತರ ಜತೆ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊಳೆರೋಗಕ್ಕೆ ತುತ್ತಾಗಿರುವ ಅಡಕೆ ಇಳುವರಿ ಕಡಿಮೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೇ ತೋಟಗಾರಿಕೆ ಸಚಿವರಾಗಿರುವುದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಬೆಳೆಗಾರರಿಗೆ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದರು.
ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಅವಳಿ ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದೆ, ರೈತರು ಬಿತ್ತನೆ ಸಮಯದಲ್ಲಿ ಒಂದು ಎಕರೆಗೆ 15 ದಾವಿರದಿಂದ 20 ಸಾವಿರದವರೆಗೆ ಖರ್ಚು ಮಾಡಿದ್ದಾರೆ. ಹಲವಾರು ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಸಾಲಗಾರರಾಗಿದ್ದಾರೆ. ಕೂಡಲೇ ರೈತರಿಗೆ ವೈಜ್ಞಾನಿಕವಾಗಿ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರಲ್ಲದೆ,
ರಾಜ್ಯ ಸಕಾರ ಕೂಡಲೇ ಮೋಡ ಬಿತ್ತನೆ ಕಾರ್ಯ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಂಜುನಾಥ್ ನೆಲಹೊನ್ನೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಮೇಶ್ ತರಗನಹಳ್ಳಿ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಾನಂದ, ಅನಿಲ್ ಕುಂದುರು ಹಾಗೂ ಇತರರು ಇದ್ದರು.
ಮಹಿಳೆಯರಿಗೆ ದೊಡ್ಡ ಉಡುಗೊರೆ: ಪ್ರಧಾನಮಂತ್ರಿ ಮೋದಿಯವರು ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲು ನೂತನ ಸಂಸತ್ ಭವನದಲ್ಲಿ ಮಂಡನೆ ಮಾಡಿದ್ದಾರೆ, ಇದು ನಿಜಕ್ಕೂ ಮಹಿಳೆಯರಿಗೆ ಕೊಟ್ಟ ದೊಡ್ಡ ಉಡುಗೊರೆ, ಹಾಗಾಗಿ ನಾನು ದೇಶದ ಎಲ್ಲ ಮಹಿಳೆಯರ ಪರವಾಗಿ ಪ್ರಧಾನಿ ನರೇಂದ್ರಮೋದಿ ಅವರನ್ನು ಅಬಿನಂಧಿಸುತ್ತೇನೆ ಎಂದು ಹೇಳಿದರು.