ಜಿಲ್ಲೆ

ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆ ; ಆಧುನಿಕ ಕೃಷಿ ಪದ್ಧತಿಯಲ್ಲಿ ಗೋವಾರದನಹಳ್ಳಿ ರೈತ ಪ್ರಸಾದ್‌ಗೆ ಯಶಸ್ಸು

ಪಟ್ಟನಾಯಕನಹಳ್ಳಿ: ಶಿರಾ ತಾಲೂಕು ಗೌಡಗೆರೆ ಹೋಬಳಿಯ ಗೋವಾರದನಹಳ್ಳಿಯ ಬರಡು ಭೂಮಿಯಲ್ಲಿ ರೈತ ಎಂ.ಎಸ್.ಪ್ರಸಾದ್ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸದಾ ಲಾಭ ತರುವ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ತುಮಕೂರಿನ ಹಿರೇಹಳ್ಳಿಯಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆ ಬೆಳೆಯ ಮೂಲಕ ತರಬೇತಿ ಪಡೆದಿರುವ ಪ್ರಸಾದ್, ಪ್ರಾಯೋಗಿಕವಾಗಿ ಗರಿಷ್ಠ 40 ಡಿಗ್ರಿ ಉಷ್ಣಾಂಶದ ಪ್ರದೇಶದ 5 ಎಕರೆಯಲ್ಲಿ ವಿದೇಶಿ ತಳಿಯ ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

2017ರಲ್ಲಿ 5 ಎಕರೆಯಲ್ಲಿ ಈ ಹಣ್ಣು ಬೆಳೆಯಲು ಆರಂಭಿಸಿದ ರೈತ, 10 ಸಾವಿರ ಗಿಡಗಳನ್ನು ತಂದು 250 ಕಲ್ಲುಗಂಬ ನೆಟ್ಟು, ಪ್ರತಿ ಕಂಬಕ್ಕೆ 4 ಗಿಡಗಳಂತೆ ನಾಟಿ ವಾಡಿದ್ದಾರೆ. 2018ರಲ್ಲಿ ಪ್ರಥಮ ಬೆಳೆ ಕೈಸೇರಿದ್ದು 6 ಟನ್ ಹಣ್ಣು ಬೆಳೆದು, 9 ಲಕ್ಷ ರೂಪಾಯಿ ಗಳಿಸಿದ್ದರು.

ಇದೀಗ ಈ ಫಸಲು ದ್ವಿಗುಣಗೊಂಡಿದ್ದು, ಪ್ರತಿ ಎಕರೆಗೆ 10 ಟನ್ ಸಲು ನಿರೀಕ್ಷೆ ವಾಡಲಾಗಿದೆ. ಸ್ವಂತ ವಾಹನ ಇಟ್ಟುಕೊಂಡಿರುವ ರೈತ ಹೊರ ರಾಜ್ಯಗಳಿಗೆ ಹಣ್ಣು ಸಾಗಣೆ ವಾಡುವ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದು, ಕೃಷಿಯಿಂದ ಕೇವಲ ನಷ್ಟ ಎಂದು ಭಾವಿಸಿರುವ ಅನೇಕರಿಗೆ ಮಾದರಿಯಾಗಿದ್ದಾರೆ.

ಕೆಜಿಗೆ 300-350 ರೂಪಾಯಿ ಮಾರಾಟ: 1988ರಲ್ಲಿ ಪ್ರಥಮವಾಗಿ ವಿಯೆಟ್ನಾಂನಲ್ಲಿ ಬೆಳೆಯಲಾದ ಈ ಹಣ್ಣನ್ನು, ತದ ನಂತರ ಚೀನಾ, ಥಾಯ್ಲೆಂಡ್, ಮಲೇಷಿಯಾದಲ್ಲಿ ಹೆಚ್ಚು ಬೆಳೆಯಲಾಯಿತು. ಭಾರತೀಯ ಪರಂಪರೆಯಲ್ಲಿ ಇದನ್ನು ಕಳ್ಳಿಗಿಡ ಎಂದೂ ಕರೆಯುತ್ತಾರೆ. ಈ ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಅಂಶಗಳು ಹೆಚ್ಚಾಗಿರುವ ಕಾರಣ ಮುಂಬೈ, ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಪ್ರತಿ 1 ಕೆಜಿ ಹಣ್ಣು 300 ರಿಂದ 350 ರೂಪಾಯಿ ವರೆಗೆ ಮಾರಾಟವಾಗುತ್ತದೆ.

ಹೆಚ್ಚು ಭೂ ಪ್ರದೇಶದಲ್ಲಿ ಒಂದೇ ಮಾದರಿ ಬೆಳೆಗೆ ಮಾರು ಹೋಗಿರುವ ರೈತನ ಸ್ಥಿತಿ ಬದಲಾಗಬೇಕು. ಕಡಿಮೆ ನೀರು ಬಳಕೆ ಹೆಚ್ಚು ಲಾಭ ನೀಡುವಂತಹ ಡ್ರ್ಯಾಗನ್ ಫ್ರೂಟ್ ಉತ್ತಮ ಆದಾಯ ತರುವಂತಹ ಬೆಳೆ, ಕಾಯಕದಲ್ಲಿ ನಂಬಿಕೆ, ವಿಶ್ವಾಸವಿದ್ದರೆ ಯಶಸ್ಸು ತಾನಾಗಿ ಬರುತ್ತದೆ. ರೈತನ ಶ್ರಮ ಆರ್ಥಿಕ ಸದೃಢನನ್ನಾಗಿಸುತ್ತದೆ. ಎಂ.ಎಸ್.ಪ್ರಸಾದ್ ಡ್ರ್ಯಾಗನ್ ಫ್ರೂಟ್ ಬೆಳೆಗಾರ, ಗೋಮಾರದನಹಳ್ಳಿ