ರಾಮನಗಿಂಡಿ ಬೀಚ್‌ನಲ್ಲಿ ಅಸ್ತವ್ಯಸ್ತ ಸ್ಥಿತಿಯಲ್ಲಿ ಶೂಟಿಂಗ್ ಸೆಟ್. 
ಜಿಲ್ಲೆ

ಸಮುದ್ರದೊಡಲು ಸೇರುತ್ತಿದೆ ‘ಡ್ರ್ಯಾಗನ್’

ವಿನಯ ಹೆಗಡೆ

ಕುಮಟಾ: ಮಳೆಗಾಲಕ್ಕೂ ಮುನ್ನ ತಾಲೂಕಿನ ರಾಮನಗಿಂಡಿ ಬೀಚ್‌ನಲ್ಲಿ ತೆಲುಗು ಸಿನಿಮಾವೊಂದಕ್ಕೆ ಹಾಕಲಾಗಿದ್ದ ಶೂಟಿಂಗ್ ಸೆಟ್ ಸಾಮಗ್ರಿಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದ ಒಡಲು ಸೇರತೊಡಗಿದ್ದು ಜನರಿಗೆ ಹಾಗೂ ಪರಿಸರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ.

ರಾಮನಗಿಂಡಿ ಬೀಚ್‌ನಲ್ಲಿ ಇನ್ನೂ ಹೆಸರು ಘೋಷಿಸಿರದ ಬಹುಭಾಷಾ ಸಿನಿಮಾವೊಂದಕ್ಕೆ ಚಿತ್ರೀಕರಣ ನಡೆಸಲು 7-8 ತಿಂಗಳ ಹಿಂದೆಯೇ ಬೃಹತ್ ಸೆಟ್ ಹಾಕಲಾಗಿತ್ತು. ಹೆಸರಾಂತ ನಟ ಜೂನಿಯರ್ ಎನ್‌ಟಿಆರ್ ಮತ್ತು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ರಾಮನಗಿಂಡಿ ಬೀಚ್‌ನಲ್ಲಿ ತಾತ್ಕಾಲಿಕವಾಗಿ ಡ್ರ್ಯಾಗನ್ ಎಂದು ಹೆಸರಿಸಲಾದ ಪ್ಯಾನ್‌ವರ್ಲ್ಡ್ ಬಹುಕೋಟಿ ರೂ. ವೆಚ್ಚದ ಸಿನಿಮಾ ಯೋಜನೆಯ ಚಿತ್ರೀಕರಣದ ಅಂತಿಮ ಹಂತವನ್ನು ಶೂಟಿಂಗ್ ಮಾಡಿದ್ದರು.

ಮಾರ್ಚ್ ತಿಂಗಳಲ್ಲೇ ಅಲ್ಲಿಗೆ ಬಂದಿದ್ದ ಚಿತ್ರೀಕರಣದ ಕಲಾವಿಭಾಗ ಹಳೆಯ ಬಂದರು ಮಾದರಿಯ ಬೃಹತ್ ಸೆಟ್‌ಅನ್ನು ಸಜ್ಜುಗೊಳಿಸಿತ್ತು. ಹಳೆಯ ಕಾಲದ ಬೋಟು, ಸಮುದ್ರ ಜಟ್ಟಿ, ಬಂದರು ಕಟ್ಟಡಗಳು, ಮನೆ, ಶೆಡ್, ಹಳೆಯ ಓಣಿಗಳು, ರೈಲು-ಹೆಲಿಕಾಪ್ಟರ್ ಮುಂತಾದ ಮಾದರಿಗಳನ್ನೂ ಮಾಡಲಾಗಿತ್ತು. ಡ್ರಾೃಗನ್ ಚಿತ್ರದ ಕ್ಲೈಮ್ಯಾಕ್ಸ್ ಆ್ಯಕ್ಷನ್ ಹಾಗೂ ಹಾಡುಗಳಿಗೆ ಸಂಬಂಧಿಸಿದ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಹೇಳಲಾಗಿತ್ತು.

ಅಂದಾಜು 15 ದಿನಗಳ ಕಾಲ ಚಿತ್ರೀಕರಣ ನಡೆಸುವ ವೇಳಾಪಟ್ಟಿಯಿದ್ದ ನಾಯಕ ಜೂ. ಎನ್‌ಟಿಆರ್ ಅವರ ಅಭಿನಯದ ಅತ್ಯಂತ ಪ್ರಮುಖ ಭಾಗದ ಚಿತ್ರೀಕರಣ ಮೇ ತಿಂಗಳಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಇದೆ. ಮೇ 15ರ ಹೊತ್ತಿಗೆ ಮುಂಗಾರು ಮಳೆ ಆರಂಭವಾಗಿದ್ದರಿಂದ ಚಿತ್ರೀಕರಣ ಸ್ಥಗಿತಗೊಳಿಸಿದ್ದರು. ಮಳೆಗಾಲದ ಬಳಿಕ ಚಿತ್ರೀಕರಣದ ಬಾಕಿ ಅಂಶವನ್ನು ಮುಗಿಸುವ ಯೋಜನೆಯನ್ನು ಚಿತ್ರೀಕರಣ ತಂಡ ಹೊಂದಿತ್ತು. ಆದರೆ, ಮಳೆಗಾಲದಲ್ಲಿ ಅಲೆಗಳ ಹೊಡೆತಕ್ಕೆ ಶೂಟಿಂಗ್ ಸೆಟ್‌ನ ಬಹುಭಾಗ ಹಾನಿಗೀಡಾಗಿದೆ.

ಕಬ್ಬಿಣದ ದೊಡ್ಡ ಗಾತ್ರದ ನಿರ್ಮಾಣವೊಂದು ಸಮುದ್ರದಲ್ಲಿ ಹೋಗಿದ್ದು ಮೀನುಗಾರರ ಬೋಟುಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಎದುರಾಗಿದೆ. ಸೆಟ್‌ನ ಕೆಲವು ಭಾಗ ಗಾಳಿಗೆ ಓರೆಕೋರೆಯಾಗಿ ನಿಂತುಕೊಂಡು ಯಾವಾಗ ಬೇಕಾದರೂ ಉರುಳುವ ಅಪಾಯವಿದ್ದು ಬೀಚ್ ಸೌಂದರ್ಯ ಸವಿಯಲು ಬರುವವರಿಗೆ ತೊಂದರೆ ತಂದಿಡಬಹುದು.

ಸಿನಿಮಾ ಚಿತ್ರೀಕರಣ ಘಟಕವು ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಪರಿಸರ, ಬಂದರು ಇಲಾಖೆ ಮುಂತಾದವುಗಳಿಂದ ಅನುಮತಿ ಪಡೆದಿರಬಹುದಾದರೂ ಮಳೆಗಾಲದ ಆರಂಭದಲ್ಲಿ ಸಿನಿಮಾ ಸೆಟ್‌ಅನ್ನು ಕೂಡಲೇ ತೆರವುಗೊಳಿಸಬೇಕಾಗಿತ್ತು. ಇದೀಗ ಹಿಂಗಾರು ಮಳೆಯ ಕಾಲಕ್ಕೆ ವಾಯುಭಾರ ಕುಸಿತದಿಂದ ಮುಂದೆ ನುಗ್ಗುತ್ತಿರುವ ಸಮುದ್ರದ ಅಬ್ಬರದ ಅಲೆಗಳು ರಾಮನಗಿಂಡಿಯ ಸಿನಿಮಾ ಸೆಟ್‌ಅನ್ನು ತನ್ನ ಒಡಲೊಳಗೆ ಬಾಚಿಕೊಳ್ಳುತಿವೆ. ಅಂದಾಜು 5-6 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಶೂಟಿಂಗ್ ಸೆಟ್ ಪಾಳುಬಿದ್ದ ನಗರದಂತಾಗಿದೆ. ಸೆಟ್‌ಗೆ ನೂರಾರು ಟನ್ ಕಬ್ಬಿಣದ ಸಾಮಗ್ರಿಗಳನ್ನು ಬಳಸಲಾಗಿರುವುದು ಕಂಡು ಬರುತ್ತದೆ. ಕಿಡಿಗೇಡಿಗಳು ಸೆಟ್ ಪ್ರದೇಶದೊಳಗೆ ಹೊಕ್ಕು ಬೆಲೆಬಾಳುವ ಹಾಗೂ ತಮಗೆ ಅಗತ್ಯವಾದ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದಾರೆ. ಈಗಾಗಲೇ ಸೆಟ್‌ನ ಕಬ್ಬಿಣದ ಸಾಮಗ್ರಿಗಳು ಸಮುದ್ರದ ಉಪ್ಪಿನಂಶಕ್ಕೆ ತುಕ್ಕು ಹಿಡಿಯುತ್ತಿದ್ದು ಪರಿಸರಕ್ಕೆ ಹಾಗೂ ಜನಾರೋಗ್ಯಕ್ಕೆ ಮಾರಕವಾಗಿದೆ. ಕೂಡಲೇ ಸಂಪೂರ್ಣ ಶೂಟಿಂಗ್ ಸೆಟ್‌ನ ಸಾಮಗ್ರಿಗಳನ್ನು ತೆರವುಗೊಳಿಸಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಬೇಕೆಂಬುದು ಸಾರ್ವನಿಕರ ಮತ್ತು ಪರಿಸರ ಪ್ರಿಯರ ಒತ್ತಾಯವಾಗಿದೆ.

ಕಳೆದ ಮೇ ತಿಂಗಳಾರ್ಧದಲ್ಲೇ ಮಳೆ ಆರಂಭವಾಗಿದ್ದರಿಂದ ರಾಮನಗಿಂಡಿ ಬೀಚ್‌ನಲ್ಲಿ ನಿಗದಿತ ಚಿತ್ರೀಕರಣ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಬಹುಶಃ ಮಳೆಗಾಲದ ನಂತರ ಶೂಟಿಂಗ್ ಮುಂದುವರಿಸುವ ಉದ್ದೇಶ ಇರಬಹುದು. ಆದರೆ ಶೂಟಿಂಗ್ ಸೆಟ್ ಮಳೆಗಾಲದಲ್ಲಿ ಸಮುದ್ರದ ಅಲೆಗಳಿಗೆ ಹಾನಿಗೀಡಾಗಿದ್ದರಿಂದ ಅಲ್ಲಿನ ಸಾಮಗ್ರಿಗಳನ್ನು ವಿಲೇವಾರಿ ಮಾಡಲು ಚಿತ್ರೀಕರಣ ತಂಡದವರು ಯಾರಿಗೋ ಹೊಣೆ ವಹಿಸಿದ್ದಾರೆಂದು ಮಾಹಿತಿ ಇದೆ. ಎಸ್.ಟಿ.ನಾಯ್ಕ, ದೇವಗಿರಿ ಗ್ರಾಪಂ ಉಪಾಧ್ಯಕ್ಷ ರಾಮನಗಿಂಡಿಯಲ್ಲಿ ಏನಾಗಿದೆ ಎಂಬ ಮಾಹಿತಿ ಇಲ್ಲ. ಇದು ಬಂದರು ಇಲಾಖೆಗೆ ಸಂಬಂಧಿಸಿದ್ದರಿಂದ ಅವರಿಂದ ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಸೂಚಿಸಲಾಗುವುದು. ಶ್ರೀಕೃಷ್ಣ ಕಾಮಕರ, ತಹಸೀಲ್ದಾರ್