ಜಿಲ್ಲೆ

ರಾಜಕೀಯ ಪುಡಾರಿ ರೀತಿ ಮಾತನಾಡುತ್ತಿರುವ ಚುನಾವಣಾ ಆಯೋಗದ ಆಯುಕ್ತ : ಡಾ.ಯತೀಂದ್ರ ಗಂಭೀರ ಆರೋಪ

ಮೈಸೂರು: ವೋಟ್‌ಚೋರಿ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ರಾಜಕೀಯ ಪುಡಾರಿ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಳಿಗೆರೆ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ಘೋಷಣೆ ಮಾಡಿತ್ತು. ಆದರೆ, ಅವರಿಗೆ ದೊರೆತ್ತಿದ್ದು 240 ಸ್ಥಾನಗಳು ಮಾತ್ರ. ವೋಟ್‌ಚೋರಿ ಮಾಡಿದರೂ ಅವರಿಗೆ 240 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಯಿತು. ಮತಗಳವು ನಡೆಯದೆ ಹೋಗಿದ್ದರೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುತಿತ್ತು ಎಂದು ಹೇಳಿದರು.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವೋಟ್ ಚೋರಿ ಕುರಿತು ಸಾಕಷ್ಟು ಅಧ್ಯಯನ ನಡೆಸಿ ದಾಖಲೆ ಸಹಿತ ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ. ಇಷ್ಟೆಲ್ಲ ಆದರೂ ಚುನಾವಣಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಚುನಾವಣಾ ಆಯೋಗ ಆಯುಕ್ತರು ರಾಜಕೀಯ ಪುಡಾರಿ ರೀತಿ ಮಾತನಾಡುತ್ತಿದ್ದಾರೆ. ಆರೋಪ ಮಾಡಿದವರನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಬಿಜೆಪಿ ಚುನಾವಣಾ ಆಯೋಗವನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿದೆ. ಈ ರೀತಿ ದೇಶದ ಸಾಂವಿಧಾನಿಕ ಸಂಸ್ಥೆಗಳು ಹಾಳಾಗುತ್ತಾ ಹೋದರೆ ದೇಶವೇ ಹಾಳಾಗಿ ಹೋಗುತ್ತದೆ ಎಂದು ಎಚ್ಚರಿಸಿದರು.

ಮತದಾರರ ಹೆಸರನ್ನು ಬೇಕಂತಲೇ ಕೈ ಬಿಡಲಾಗುತ್ತಿದೆ. ಸಾಕಷ್ಟು ಮತದಾರರಿಗೆ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈ ಬಿಟ್ಟಿರುವುದೇ ತಿಳಿಯುವುದಿಲ್ಲ. ಅವರಿಗೆ ತಿಳಿಯುವಷ್ಟರೊಳಗೆ ಚುನಾವಣೆಯೇ ಮುಕ್ತಾಯಗೊಂಡಿರುತ್ತದೆ. ಅರ್ಹ ಮತದಾರರನ್ನು ಕೈಬಿಟ್ಟು ನಕಲಿ ಮತದಾರರನ್ನು ಬಿಜೆಪಿ ನಾಯಕರು ಸೇರಿಸುತ್ತಿದ್ದಾರೆ. ಅವರು ಅಧಿಕಾರಕ್ಕೇರಲು ಯಾವ ನೀಚ ಮಟ್ಟಕ್ಕಾದರೂ ಇಳಿಯುತ್ತಾರೆ. ಅವರಿಗೆ ಸಂವಿಧಾನ, ಕಾನೂನಿನ ಬಗ್ಗೆ ಯಾವುದೇ ಗೌರವ ಇಲ್ಲ ಎಂದು ಕಿರಿಕಾರಿದರು.