ಜಿಲ್ಲೆ

ಜನಾಂಗಗಳ ಮತಾಂತರದಿಂದ ಸಂಸ್ಕೃತಿ ನಾಶ...

ಚಿಂತಕ ಡಾ. ವೈ.ಎನ್​. ಶೆಟ್ಟಿ ಆತಂಕ

ತಲ್ಲೂರು ಜಾನಪದ ಸಿರಿ ಪ್ರಶಸ್ತಿ ಸ್ವೀಕಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರಕೃತಿಯಲ್ಲಿರುವ ವಿವಿಧ ಜನಾಂಗಗಳ ಕಲೆ, ಆಹಾರ, ವೇಷ-ಭೂಷಣಗಳನ್ನೆಲ್ಲ ನಾವು ಕಡೆಗಣಿಸುತ್ತಿದ್ದೇವೆ. ಬಹು ಸಂಸ್ಕೃತಿ ಹೊಂದಿದ್ದ ಭಾರತವೀಗ ಏಕ ಸಂಸ್ಕೃತಿಯ ದೇಶವಾಗತೊಡಗಿದೆ. ಅನೇಕ ಬುಡಕಟ್ಟು ಜನಾಂಗಗಳು ಮತಾಂತರಗೊಳ್ಳುತ್ತಿದ್ದು ಎಷ್ಟೋ ಪ್ರಕಾರದ ಜನಪದ ಸಂಸ್ಕೃತಿ ನಾಶವಾಗುತ್ತಿದೆ. ಉಳಿದಿರುವ ಸಂಸ್ಕೃತಿಯನ್ನಾದರೂ ಉಳಿಸುವ ಕಾರ್ಯ ಆಗಬೇಕಿದೆ ಎಂದು ಜಾನಪದ ಚಿಂತಕ ಡಾ. ವೈ.ಎನ್​. ಶೆಟ್ಟಿ ನುಡಿದರು.

ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಮದಲ್ಲಿ ರಂಗಭೂಮಿ (ರಿ.) ಉಡುಪಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್​ (ರಿ.) ಉಡುಪಿ, ಕೇರಳ ಕಲ್ಚರಲ್​ ಆ್ಯಂಡ್​ ಸೋಶಿಯಲ್​ ಸೆಂಟರ್​ (ರಿ.) ಉಡುಪಿ, ಕರ್ನಾಟಕ ಜಾನಪದ ಪರಿಷತ್​ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಕೇರಳ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ತಲ್ಲೂರು ಜಾನಪದ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಜನರ ಜೀವನಾಡಿ

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್​ ಮಾತನಾಡಿ, ಗ್ರಾಮೀಣ ಕೃಷಿ ಪದ್ಧತಿಯೇ ಜಾನಪದವಾಗಿದೆ. ಹಳ್ಳಿ ಭಾಗದಲ್ಲಿರುವ ಎಲ್ಲ ಧರ್ಮ, ಮತದವರಿಗೂ ಕೃಷಿಯೇ ಜೀವಾಳ. ಕೃಷಿಯಿಂದಲೇ ಎಲ್ಲ ಬಗೆಯ ಜಾನಪದ ಕಲೆ ಹುಟ್ಟಿಕೊಂಡಿದ್ದು, ನಾಡಿನ ಜೀವನಾಡಿ ಆಗಿದೆ ಎಂದರು.

ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕೇರಳ ಕಲ್ಚರಲ್​ ಆ್ಯಂಡ್​ ಸೋಶಿಯಲ್​ ಸೆಂಟರ್​ (ರಿ.) ಉಡುಪಿಯ ಅಧ್ಯಕ್ಷ ಲ. ಸುಗುಣಕುಮಾರ್​, ಕಾರ್ಯದರ್ಶಿ ಲ. ಬಿನೇಶ್​ ವಿ.ಸಿ., ರಂಗಭೂಮಿಯ ಉಪಾಧ್ಯಕ್ಷರಾದ ಭಾಸ್ಕರ್​ ರಾವ್​ ಕಿದಿಯೂರು, ಎನ್​.ಆರ್​. ಬಲ್ಲಾಳ್​, ಕಾರ್ಯಾಧ್ಯಕ್ಷ ಅರುಣಕುಮಾರ್​ ಹೆಗ್ಡೆ, ಪ್ರ.ಕಾರ್ಯದರ್ಶಿ ಪ್ರದಿಪ್​ ಚಂದ್ರ ಕುತ್ಪಾಡಿ, ಸಂಘಟನಾ ಕಾರ್ಯದರ್ಶಿ ಗೋಪಾಲ್​ ಸಿ. ಬಂಗೇರ, ಕಾರ್ಕಳ ತಾಲೂಕು ಅಧ್ಯಕ್ಷ ಎನ್​.ಎಂ. ಹೆಗ್ಡೆ, ಉಪಸ್ಥಿತರಿದ್ದರು.

ಅನೂಷಾ ಆಚಾರ್​ ಸ್ವಾಗತಿಸಿದರು. ಪ್ರಶಸ್ತಿ ಪುರಸತರನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್​ನ ಗಿರಿಜಾ ತಲ್ಲೂರು ಪರಿಚಯಿಸಿದರು. ಜಾನಪದ ಪರಿಷತ್​ ಉಡುಪಿ ತಾಲೂಕು ಅಧ್ಯಕ್ಷ ಸುನೀಲಕುಮಾರ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪ್ರಶಾಂತ ಭಂಡಾರಿ ವಂದಿಸಿದರು.

ಮನ ಸೆಳೆದ ಕೇರಳದ ವಿವಿಧ ಕಲೆ

ಸಭಾ ಕಾರ್ಯಕ್ರಮಕ್ಕೂ ಮುನ್ನ ನಡೆದ ರಸಿಕರ್​ ಕೇರಳ ಎಂಟರ್​ಟೇನ್​ಮೆಂಟ್​ ತಂಡದಿಂದ ನಡೆದ ಕೇರಳ ಜಾನಪದ ಉತ್ಸವ ಮನ ಸೆಳೆಯಿತು. ಕಲಾಭವನ್​ ರಾಗೇಶ್​ ನಿರ್ದೇಶನದಲ್ಲಿ ಕಲಾವಿದರು ಕಳರಿಪಯಟ್ಟು, ವಡಿ ನೃತ್ಯಂ, ಆದಿವಾಸಿ ನೃತ್ಯಂ, ಕರಿಂಕಾಳಿಯಾಟ್ಟಂ, ಮುಡಿಯೆಟ್ಟು ಎಂಬ ಕಲೆಗಳ ವೈಭವ ಪ್ರದರ್ಶಿಸಿದರು. ಕೇರಳ ಕಲ್ಚರಲ್​ ಆ್ಯಂಡ್​ ಸೋಶಿಯಲ್​ ಸೆಂಟರ್​ (ರಿ.) ಉಡುಪಿಯ ಮಹಿಳಾ ಘಟಕದಿಂದ ಪ್ರಸ್ತುತಿಗೊಂಡ 'ತಿರುವಾತಿರಕಳಿ' ಕಲೆ ಪ್ರೇಕ್ಷರಕ ಮನ ಸೆಳೆಯಿತು.