ಬೆಂಗಳೂರು: ತಮ್ಮ ಸಮಾಜಮುಖಿ ಕಾರ್ಯಗಳಿಂದ ರಾಜ್ಯದ ಮನೆ-ಮನಗಳಲ್ಲಿ ಮಂಜುನಾಥನ ಆಶೀರ್ವಾದದ ಜ್ಯೋತಿ ಬೆಳಗಿಸಿದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಎಂದು ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವರುದ್ರ ಸ್ವಾಮೀಜಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ‘ನಿಮಿತ್ತಮಾತ್ರಂ’ ಸಿಟಿಜನ್ಸ್ ಫೋರಮ್ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಐದು ದಶಕಗಳ ಸೇವಾಪಥದ ಅನಾವರಣ ‘ಧರ್ಮದರ್ಶನ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಪರಂಪರೆಯಿಂದ ಬಂದ ದೊಡ್ಡ ಅಧಿಕಾರ, ಅವಕಾಶ ಮತ್ತು ಜವಾಬ್ದಾರಿಯನ್ನು ತಮ್ಮ ಸಣ್ಣ ವಯಸ್ಸಿನಲ್ಲಿಯೇ ಹೊತ್ತುಕೊಂಡು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಡೆಯವರು, ಸಮಾಜದ ಹಿರಿಯ ವ್ಯಕ್ತಿಗಳು, ಸ್ವಾಮೀಜಿಗಳು ಮತ್ತು ದಾರ್ಶನಿಕರ ಅನುಭವದ ಮಾತುಗಳನ್ನು ಕೃತಿಗಿಳಿಸಿ ಅಸಾಧ್ಯ ಎಂದೆನಿಸಿದ ಹಲವು ಕಾರ್ಯಗಳನ್ನು ಮಂಜುನಾಥನ ಅನುಗ್ರಹದಿಂದ ಸರಳ ಮತ್ತು ಸುಲಭವಾಗಿ ಸಾಧ್ಯವಾಗಿಸಿದ್ದಾರೆ.
ತುರ್ತುಪರಿಸ್ಥಿತಿಯ ನಂತರ ಸಮಾಜದಲ್ಲಿ ಉಂಟಾಗಿದ್ದ ಅವ್ಯವಸ್ಥೆಯನ್ನು ಕೊನೆಗೊಳಿಸಿ ರಾಜ್ಯದಲ್ಲಿ ಸೌಹಾರ್ದ ನಿರ್ಮಾಣವಾಗಲು ಹೆಗ್ಗಡೆಯವರು ರಾಜ್ಯದಲ್ಲಿ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಕಾರ್ಯಕ್ರಮ ಪ್ರಮುಖವಾಗಿತ್ತು. ಆಳುವ ಸರ್ಕಾರಗಳಿಗೆ ಸಮಾಜ ಕಲ್ಯಾಣ ಕಾರ್ಯಕ್ರಮ ರೂಪಿಸಲು ಧರ್ಮಸ್ಥಳದ ಕಾರ್ಯಕ್ರಮಗಳು ಪ್ರೇರಣೆಯಾಗಿವೆ ಎಂದು ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ ಆಳ್ವಾ ಮಾತನಾಡಿ, ಧಾರ್ಮಿಕ ಮತ್ತು ಸಾಮಾಜಿಕವಾದ ನೂರಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮರ್ಯಾದಾ ಪುರುಷೋತ್ತಮನಂತೆ ಬೆಳಗಿದವರು ವೀರೇಂದ್ರ ಹೆಗ್ಗಡೆಯವರು ಎಂದು ಹೇಳಿದರು.
ಒಳ್ಳೆಯ ಸಮಾಜವನ್ನು ಕಟ್ಟುವಾಗ ಮಹಾನ್ ವ್ಯಕ್ತಿಗಳ ಜೀವನವನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಈ ಕಾಲದಲ್ಲಿ ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿತ್ವದಿಂದ ಗುರುತಿಸಿಕೊಂಡವರು ಹೆಗ್ಗಡೆಯವರು. ಅವರು ಆಳವಾದ ಅಧ್ಯಯನದ ಮೂಲಕ ಬದ್ಧತೆಯಿಂದ ದೀರ್ಘಕಾಲ ಉಳಿಯುವಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ವಿಚಾರ ಸಂಕಿರಣದಲ್ಲಿ ಶಿಕ್ಷಣ ತಜ್ಞ ಪ್ರೊ. ಗೋಪಾಲ್ ನಾಯ್ಕ, ನಿರ್ದೇಶಕ ಟಿ.ಎಸ್.ನಾಗಾಭರಣ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಲ್ ಶಂಕರ್, ವಿಹಿಂಪ ಮುಖಂಡ ಸೂರ್ಯನಾರಾಯಣ ಮತ್ತಿತರರು ಪಾಲ್ಗೊಂಡು ದಿನಪೂರ್ತಿ ನಡೆದ ವಿವಿಧ ಗೋಷ್ಠಿಗಳಲ್ಲಿ ವಿಷಯ ಮಂಡಿಸಿದರು.
ಸುಳ್ಳನ್ನು ವಿಜೃಂಭಿಸುವ ಕೆಲಸಗಳನ್ನು ತಡೆಗಟ್ಟಲು ಧರ್ಮದರ್ಶನದಂತಹ ಕಾರ್ಯಕ್ರಮ ಅಗತ್ಯವಾಗಿದೆ. ನ್ಯಾಯ ಮತ್ತು ಸತ್ಯದ ಪರವಾಗಿ ದನಿಯೆತ್ತುವ ಕೆಲಸ ನಮ್ಮೆಲ್ಲರದ್ದು. ಸುಳ್ಳು ಜಗತ್ತನ್ನು ಸುತ್ತುತ್ತಿದ್ದರೂ ಅಂತಿಮ ಜಯ ಸತ್ಯದ್ದೇ ಆಗಿದೆ - -ಬಿ.ಎಲ್ ಶಂಕರ್, ಮಾಜಿ ಸಭಾಪತಿ
ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಾನ್ ವ್ಯಕ್ತಿಗಳನ್ನು ಸಮಾಜದೆದುರು ಸಮರ್ಥವಾಗಿ ಪರಿಚಯಿಸುವ ಉದ್ದೇಶದಿಂದ ಧರ್ಮದರ್ಶನ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದಲ್ಲಿ ಒಳಿತನ್ನು ಹಬ್ಬಿಸುವ ಉದ್ದೇಶದಿಂದ ಸಜ್ಜನರನ್ನು ಒಟ್ಟು ಸೇರಿಸುವ ಕೆಲಸ ಈ ಮೂಲಕ ಆಗಿದೆ. ವೀರೇಂದ್ರ ಹೆಗ್ಗಡೆಯವರು 5 ದಶಕಗಳಿಂದ ನಿರಂತರವಾಗಿ ಸಮಾಜಕ್ಕಾಗಿ ದುಡಿದು ಆ ಮೂಲಕ ಲಕ್ಷಾಂತರ ಜನರ ದಾರಿದೀಪವಾಗಿದ್ದಾರೆ. --ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್ ಸಂಸ್ಥಾಪಕ