ಸಿಂದಗಿ: ವಿಶ್ವವೇ ಗುರುತಿಸುವ ಖ್ಯಾತ ಸಮಗ್ರ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ವ್ಯಕ್ತಿತ್ವಕ್ಕೆ ಅಧ್ಯಯನ, ಬೋಧನೆ, ಸಂಶೋಧನೆ, ಯೋಜನೆ ಹಾಗೂ ಸಮಾಜಮುಖಿ ಚಿಂತನೆ ಎಂಬ ಪಂಚ ಮುಖಗಳಿದ್ದವು ಎಂದು ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಹೇಳಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಧಾರವಾಡ ಹಾಗೂ ಕಲಬುರ್ಗಿ ೌಂಡೇಷನ್ ವಿಜಯಪುರ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಬುರ್ಗಿ ಅವರು ಸಂಶೋಧನಾತ್ಮಕವಾಗಿ ಹೇಳಲು ಬಾರದ ರೋಷ, ಹತಾಸೆ, ಕ್ರೋಧ ಮತ್ತು ಸಾತ್ವಿಕತೆಯನ್ನು ಕವಿತೆಗಳ ಮೂಲಕ ಅನಾವರಣಗೊಳಿಸಿದರು. ಕಲಬುರ್ಗಿ ಅವರ ಪದಗಳು, ಸಾಹಿತ್ಯ ಜನಸಾಮಾನ್ಯರಿಗೆ ನಿಲುಕದಂತಿದ್ದು, ಅವು ವಿದ್ವಾಂಸರಿಗೆ ಮಾತ್ರ ತಿಳಿದಿರುವಂತಹವು. ಭವಿಷ್ಯದ ಪೀಳಿಗೆಗೆ ಅವರ ಸೃಜನಶೀಲ ಸಾಹಿತ್ಯ, ನಾಟಕಗಳನ್ನು ಪರಿಚಯಿಸಲು ಕಾಲೇಜಿಗೊಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತ್ಯ, ಸಂಶೋಧನೆ, ಬರಹ, ಭಾಷಣ, ವಿಚಾರ ಸಂಕಿರಣಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಪ್ರತಿಷ್ಠಾನ ಹಮ್ಮಿಕೊಳ್ಳುತ್ತಿದೆ ಎಂದರು.
ವಿಚಾರ ಸಂಕಿರಣ: ಚಡಚಣದ ಸಂಗಮೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಎಸ್.ಮಾಗಣಗೇರಿ ಅವರು ಕೆಟ್ಟಿತ್ತು ಕಲ್ಯಾಣ ಎಂಬ ವಿಷಯದ ಕುರಿತು ಮಾತನಾಡಿ, ಬಹುತೇಕ ನಾಟಕಕಾರರು ಬಸವಣ್ಣನ ಬದುಕನ್ನು ಅನೇಕ ಹೆಸರಿನ ನಾಟಕದಲ್ಲಿ ಬರೆದಿದ್ದಾರೆ. ಈ ನಾಟಕ ಆಂಗ್ಲ, ಹಿಂದಿ ಮತ್ತು ಮಲಯಾಳಂ ಭಾಷೆಗೆ ಅನುವಾದಗೊಂಡಿದೆ. ಕಲಬುರ್ಗಿ ಅವರು ಕೆಟ್ಟಿತ್ತು ಕಲ್ಯಾಣ ನಾಟಕದಲ್ಲಿ ವಚನ ಮತ್ತು ಬಸವಣ್ಣನನ್ನು ನೆಲೆಗೊಳಿಸಿ, ಬಸವಣ್ಣನ ತತ್ವಜ್ಞಾನದೊಂದಿಗೆ ಧರ್ಮ ಬಿಟ್ಟ ಕಲ್ಯಾಣದ ಅವಸಾನವನ್ನು ಚಿತ್ರಿಸುತ್ತದೆ. 40 ದೃಶ್ಯ, 80 ಪಾತ್ರಗಳಲ್ಲಿ ಶರಣ ಪರಂಪರೆಯ ಅಧ್ಯಯನದೊಂದಿಗೆ ಸೃಜನಶೀಲವಾಗಿ ಕಟ್ಟಿಕೊಟ್ಟಿರುವ ಕಲಬುರ್ಗಿ ಅವರು ಬಾಗೇವಾಡಿಯ ಅಗ್ರಹಾರ, ಕೋಡಲ ದೇಗುಲ ಹಾಗೂ ಕಲ್ಯಾಣದ ರಾಜ ಸಂಸ್ಕೃತಿಯ ಮೂರು ಭಾಗಗಳನ್ನು ಚಿತ್ರಿಸಿದ್ದಾರೆ. ಆದರೆ ಬಸವಣ್ಣ ಮಂಗಳವೇಡೆಯಲ್ಲಿ ತಾನು ಯಾರು ? ಏನು ? ಎಂಬ ಸಾಕ್ಷೀಕರಣವನ್ನು ನಾಲ್ಕನೇ ಭಾಗವಾಗಿ ಕಟ್ಟಿಕೊಡಬೇಕಿತ್ತು. ಕೆಟ್ಟಿತ್ತು ಕಲ್ಯಾಣ ನಾಟಕ, ಮಾಡುವ ನಾಟಕವಲ್ಲ. ಅದು ಕೇವಲ ಓದುವ ನಾಟಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲಕೇರಿಯ ಸಾಹಿತಿ ಮನು ಪತ್ತಾರ ಅವರು ‘ನೀರು ನೀರಡಿಸಿತ್ತು ಮತ್ತು ನೀರಾಗ ನಿಂತೀನಿ ನೀರಡಿಸಿ’ ಎಂಬ ಕಾವ್ಯಗಳ ಕುರಿತು ಮಾತನಾಡಿ, ಬಸವಣ್ಣ ಮತ್ತು ಕನ್ನಡಕ್ಕಾಗಿ ದುಡಿದ ಸೃಜನಶೀಲ ಸಾಹಿತಿ ಮತ್ತು ಸಂಶೋಧಕ ಡಾ.ಕಲಬುರ್ಗಿ ಅವರು ಸದಾ ಜಂಗಮ ಪ್ರಜ್ಞೆಯನ್ನು ಹೊಂದಿದ್ದರು. ನೆಲಮೂಲ ಸಂಸ್ಕೃತಿಯ ಅರಿವಿಟ್ಟುಕೊಂಡು ನೀರಿನ ಮೌಲ್ಯಕ್ಕೆ ಕಥನ ಮಾದರಿಯ ಕಾವ್ಯವನ್ನು ಲಯವಾಗಿ, ಸಮಾಜಕ್ಕೆ ಜಾಗೃತ ಸಂದೇಶದೊಂದಿಗೆ ಕಟ್ಟಿಕೊಡುವ ಮೂಲಕ ಕಾವ್ಯ ಪರಂಪರೆಗೆ, ಕನ್ನಡಕ್ಕೆ ಹೊನ್ನ ಭಾಗೀರಥಿಯನ್ನು ತಂದ ಭಗೀರಥರಾಗಿದ್ದಾರೆ. ಅವರ 2 ಕವನ ಸಂಕಲನ ಹಾಗೂ ಅದರೊಳಗಿನ 80ಕ್ಕೂ ಹೆಚ್ಚು ಕವಿತೆಗಳಲ್ಲಿ ಸಮಾಜಮುಖಿ ಮತ್ತು ಸಾತ್ವಿಕ ಸಿಟ್ಟಂತಿವೆ. ಸತ್ಯವನ್ನು ಜನರೆಡೆಗೆ ಕರೆದೊಯ್ಯುವ ಕವಿಯ ಆತ್ಮಶಕ್ತಿಯ ಸ್ಪಷ್ಟತೆಯ ಗುಟ್ಟುಗಳನ್ನು ಅಡಗಿಸಿಟ್ಟು ಬೆಂಕಿ-ಬೆಳಕಿನ ಚಲನಶೀಲ ಪ್ರಜ್ಞೆಯನ್ನು ಪೋಷಿಸಿದ್ದಾರೆ ಎಂದರು.
ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವಿಚಾರ ಸಂಕಿರಣವನ್ನು ಆಕ್ಲಂಡ್ ಬಸವ ಸಮಿತಿ ಸಂಸ್ಥಾಪಕ ಡಾ.ಲಿಂಗಣ್ಣ ಕಲಬುರ್ಗಿ ಉದ್ಘಾಟಿಸಿದರು. ಪ್ರತಿಷ್ಠಾನದ ಸದಸ್ಯೆ ಹನುಮಾಕ್ಷಿ ಗೋಗಿ ಆಶಯ ನುಡಿಗಳನ್ನಾಡಿದರು. ಪ್ರತಿಷ್ಠಾನದ ಸದಸ್ಯ ಚಂದ್ರಶೇಖರ ವಸ್ತ್ರದ, ವಿಜಯಪುರದ ಕಲಬುರ್ಗಿ ೌಂಡೇಷನ್ ಅಧ್ಯಕ್ಷ ಶಿವಲಿಂಗ ಕಲಬುರ್ಗಿ, ಡಾ.ಎಂ.ಎಂ.ಪಡಶೆಟ್ಟಿ ಇದ್ದರು. ನಂತರ ಡಾ.ವಿಕ್ರಮ ವಿಸಾಜಿ ರಚನೆಯ, ಪ್ರವೀಣ ರೆಡ್ಡಿ ಗುಂಜಹಳ್ಳಿ ನಿರ್ದೇಶನದೊಂದಿಗೆ ರಕ್ತವಿಲಾಪ ನಾಟಕ ಪ್ರದರ್ಶನಗೊಂಡಿತು.