ಜಿಲ್ಲೆ

ಪೌರಾಣಿಕ ನಾಟಕದಿಂದ ನೈತಿಕ ಸಮಾಜ ನಿರ್ಮಾಣ

ಡಾ.ತಲ್ಲೂರು ಶಿವರಾಮ ಶೆಟ್ಟಿ ಅನಿಸಿಕೆ

ಬಿಕ್ರಮ ಭಜರಂಗಿ ಪುಸ್ತಕ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶಾಲಾ ಮಕ್ಕಳಿಗೆ, ಯುವ ಜನತೆಗೆ ನೈತಿಕ ಸಂದೇಶ ಬಿತ್ತಲು ಪೌರಾಣಿಕ ಪ್ರಸಂಗ ಅಥವಾ ನಾಟಕಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಪುರಾಣ ಕಥಾನಕಗಳಲ್ಲಿ ಅಡಕವಾಗಿರುವ ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆ ಮೊದಲಾದ ಮೌಲ್ಯಗಳು ನೈತಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿ ಹೊಂದಿವೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಉಪ್ಪೂರಿನಲ್ಲಿರುವ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಮಣಿಪಾಲದ ಗುರುವಸಂತಿ ಸಾಂಸ್ಕೃತಿಕ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಜಯರಾಮ ಮಣಿಪಾಲ ಅವರ ಬಿಕ್ರಮ ಭಜರಂಗಿ ಪೌರಾಣಿಕ ನಾಟಕ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಹೆತ್ತವರ ವೃದ್ಧಾಶ್ರಮಕ್ಕೆ ನೂಕಬೇಡಿ

ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿದರಷ್ಟೇ ಸಾಲದು. ತಂದೆ-ತಾಯಂದಿರು ತಮ್ಮ ಮಕ್ಕಳಿಗಾಗಿ ಪಡುವ ಸಂಕಷ್ಟಗಳನ್ನು ಮನದಟ್ಟು ಮಾಡಬೇಕು. ಇಂದು ಹೆಜ್ಜೆಗೊಂದು ಅನಾಥಾಶ್ರಮ, ವೃದ್ಧಾಶ್ರಮ ಕಾಣಿಸುತ್ತಿದೆ. ಅಲ್ಲಿರುವ ಹಿರಿಯ ಜೀವಗಳನ್ನು ಕಂಡಾಗ ನಮ್ಮ ಮಕ್ಕಳಿಗೆ ಅಪ್ಪ-ಅಮ್ಮಂದಿರು ಬೇಡವಾಗಿದ್ದಾರೆ ಎನ್ನುವುದು ಕಂಡುಬರುತ್ತದೆ. ಅಂತಹ ಹೀನಾಯ ವಿದ್ಯಮಾನ ನಿಲ್ಲಬೇಕು. ಮುದುಕರಾದ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಬಾರದೆಂದರೆ ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕ ಮೌಲ್ಯ ಕಲಿಸಬೇಕು. ಪೌರಾಣಿಕ ಯಕ್ಷಗಾನ, ನಾಟಕ ಪ್ರರ್ದಾನಕ್ಕೆ ಮಕ್ಕಳನ್ನು ಕೊಂಡೊಯ್ಯಬೇಕು ಎಂದರು.

ಶ್ರೀ ರಾಮಾಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪರಮೇಶ್ವರ ಮುದ್ದೋಡಿ ಶುಭಾಶಂಸನೆಗೈದರು.

ಉಡುಪಿಯ ಉಷಾ ಮ್ಯಾರೇಜ್​ ಬ್ಯುರೋದ ಎಂಡಿ ಸುಗುಣಕುಮಾರ್​, ಶ್ರೀ ದುರ್ಗಾಪರಮೇಶ್ವರಿ ಕೋ-ಆಪರೇಟಿವ್​ ಸೊಸೈಟಿ ಪರ್ಕಳದ ಅಧ್ಯಕ್ಷ ಅಶೋಕ ಕಾಮತ ಕೊಡಂಗೆ, ಸಿವಿಲ್​ ಇಂಜಿನಿಯರ್​ ಪರಮೇಶ್ವರ ಪರ್ಕಳ, ಉಡುಪಿ ತಾಪಂ ಮಾಜಿ ಸದಸ್ಯ ಸತ್ಯಾನಂದ ನಾಯಕ, ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ ಎಚ್​.ಪಿ., ರಾಮಾಂಜನೇಯ ದೇವಳದ ಅಧ್ಯಕ್ಷ ಕೆ.ಪಿ. ನಾಯಕ, ಸಂಗೀತ ವಿದ್ವಾನ್​ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ ಇತರರಿದ್ದರು.

ಜಯರಾಮ ಮಣಿಪಾಲ ವಂದಿಸಿದರು. ಸಂತೋಷ ಸಗ್ರಿ ಕಾರ್ಯಕ್ರಮ ನಿರೂಪಿಸಿದರು.