ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಡಾ.ಶ್ಯಾಮಾ ಪ್ರಸಾದ್​ ಮುಖರ್ಜಿ ಅವರ ಬಲಿದಾನ್​ ದಿವಸ್​ ಆಚರಿಸಲಾಯಿತು. ಕಿಶೋರಕುಮಾರ್​ ಕುಂದಾಪುರ, ಅಜಿತ್​ ಶೆಟ್ಟಿ ಹೆರಂಜೆ, ಮಟ್ಟಾರು ರತ್ನಾಕರ್​ ಹೆಗ್ಡೆ, ರೇಷ್ಮಾ ಯು. ಶೆಟ್ಟಿ, ದಿನಕರ ಶೆಟ್ಟಿ ಇದ್ದರು. 
ಜಿಲ್ಲೆ

ಬ್ರಿಟಿಷ್​ ಶಿಕ್ಷಣ ವ್ಯವಸ್ಥೆ ವಿರೋಧಿಸಿದ ಧೀಮಂತ ನಾಯಕ

ಅಜಿತ್​ ಶೆಟ್ಟಿ ಹೆರಂಜೆ ಬಣ್ಣನೆ | ಡಾ.ಶ್ಯಾಮಾಪ್ರಸಾದ್​ ಮುಖರ್ಜಿ ಬಲಿದಾನ್​ ದಿವಸ್​

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತೀಯತೆ ಹಾಗೂ ಹಿಂದುತ್ವದ ಉಳಿವಿಗೆ ಶ್ರಮಿಸಿದವರಲ್ಲಿ ಭಾರತೀಯ ಜನ ಸಂಘ ಪ್ರಮುಖರಾಗಿದ್ದ ಡಾ. ಶ್ಯಾಮಾ ಪ್ರಸಾದ್​ ಮುಖರ್ಜಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ದೇಶದಲ್ಲಿ ಗುಲಾಮಿ ಪದ್ಧತಿಯ ಆಡಳಿತ ಹೇರಿದ್ದ ಹಾಗೂ ಬ್ರಿಟಿಷ್​ ಶಿಕ್ಷಣ ನೀತಿ ವಿರೋಧಿಸಿದ ಧೀಮಂತ ನಾಯಕ ಅವರು ಎಂದು ಬಿಜೆಪಿಯ ಕಮಲಪಥ ಪತ್ರಿಕೆಯ ರಾಜ್ಯ ಸಹ ಸಂಪಾದಕ ಅಜಿತ್​ ಶೆಟ್ಟಿ ಹೆರಂಜೆ ಬಣ್ಣಿಸಿದರು.

ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಶ್ಯಾಮಾ ಪ್ರಸಾದ್​ ಮುಖರ್ಜಿ ಬಲಿದಾನ್​ ದಿವಸ್​ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಪಂಚಶೀಲ ನೀತಿ ಜಾರಿ

1901ರಲ್ಲಿ ಬಂಗಾಲದಲ್ಲಿ ಶ್ರೀಮಂತ ಕುಟುಂಬದಲ್ಲಿ ಅವರು ಜನಿಸಿದರು. ತಂದೆ ವೈದ್ಯರಾಗಿದ್ದರು. ಬಂಗಾಲಿ ಭಾಷೆಯಲ್ಲಿ ಪದವಿ ಗಳಿಸಿ, ಇಂಗ್ಲಂಡ್​ನಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಅವರ 30ನೇ ವಯಸ್ಸಿನಲ್ಲಿ ಬ್ರಿಟಿಷ್​ ಅಧೀನದಲ್ಲಿದ್ದ ಬಂಗಾಲ ವಿಶ್ವವಿದ್ಯಾನಿಲಯದ ಕುಲಪತಿಯಾದರು. ಬ್ರಿಟಿಷ್​ ಇಂಗ್ಲಿಷ್​ ಶಿಕ್ಷಣ ಪದ್ಧತಿ ವಿರೋಧಿಸಿ, ವಿವಿಯಲ್ಲಿ ಬಂಗಾಳ ಭಾಷೆ ಜಾರಿಗೆ ಮುಂದಾದರು. ರವೀಂದ್ರನಾಥ್​ ಠ್ಯಾಗೋರ್​ ಅವರಿಂದ ಬಂಗಾಲಿ ಭಾಷೆಯಲ್ಲಿ ಭಾಷಣ ಮಾಡಿಸಿ, ಅವರನ್ನೇ ಬಂಗಾಲಿ ಭಾಷೆಯ ಉಪನ್ಯಾಸಕರನ್ನಾಗಿಯೂ ನೇಮಿಸಿದರು. ವಿವಿಯ 2ನೇ ಘಟಿಕೋತ್ಸವದಲ್ಲಿ ಭಾರತದ ಶಿಕ್ಷಣ ಹೇಗಿರಬೇಕೆಂಬ ಉದ್ದೇಶದಿಂದ ಪಂಚಶೀಲ ನೀತಿ ಜಾರಿಗೆ ತಂದಿದ್ದರು ಎಂದು ತಿಳಿಸಿದರು.

ದೇಶದಲ್ಲಿಯೇ ವಿಭಿನ್ನ ಪಕ್ಷ

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ ಮಾತನಾಡಿ, ಬಿಜೆಪಿಯು ದೇಶದಲ್ಲಿಯೇ ವಿಭಿನ್ನವಾದ ಪಕ್ಷ. ಹಿರಿಯರ ಸಾಧನೆ, ಶ್ರಮ ಹಾಗೂ ತ್ಯಾಗವನ್ನು ನಾವು ನೆನಪಿಸಿಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದೇಶದ ಇತಿಹಾಸ ಅವಲೋಕಿಸಿದಾಗ ಭಾರತೀಯ ಜನತಾ ಪಾರ್ಟಿ ಅತ್ಯಂತ ಶ್ರೇಷ್ಠ ಪಕ್ಷ ಎನ್ನುವುದು ತಿಳಿಯುತ್ತದೆ. ಅಂತಹ ಪಕ್ಷದಲ್ಲಿ ನಾವು ಕಾರ್ಯಕರ್ತರಾಗಿದ್ದೇವೆ ಎಂಬ ಹೆಮ್ಮೆ ನಮಗೆಲ್ಲರಿಗೂ ಇರಬೇಕು ಎಂದರು.

ಶಿಲ್ಪಾ ಸುವರ್ಣ, ಪ್ರಕಾಶ್​ ಶೆಟ್ಟಿ ಪಾದೆಬೆಟ್ಟು, ಸುರೇಶ್​ ಶೆಟ್ಟಿ, ದಿನಕರ್​ ಬಾಬು, ಮಟ್ಟಾರು ರತ್ನಾಕರ್​ ಹೆಗ್ಡೆ ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಯು. ಶೆಟ್ಟಿ ಹಾಗೂ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರ್ವಹಿಸಿದರು.

ಗೃಹಬಂಧನ ವಿಧಿಸಿದ್ದ ಪ್ರಧಾನಿ ನೆಹರು

ಬಂಗಾಲದಲ್ಲಿ ಹುಸೇನ್​ ಸುರ್​ಹಾವರ್ದಿ ನಾಯಕತ್ವದ, ಮುಸ್ಲಿಂ ಪ್ರಭುತ್ವದ ಕೃಷಿಕ್​ ಪ್ರಜಾ ಪಾರ್ಟಿಯೊಂದಿಗೆ ಸೇರಿ ಡಾ. ಶ್ಯಾಮಾ ಪ್ರಸಾದ್​ ಮುಖರ್ಜಿ ಸಮ್ಮಿಶ್ರ ಸರ್ಕಾರ ರಚಿಸಿದರು. ವಿತ್ತ ಸಚಿವರಾಗಿದ್ದ ಅವರು, ಪಕ್ಷದ ಮುಸ್ಲೀಂ ತುಷ್ಟೀಕರಣಕ್ಕೆ ಬೇಸತ್ತು ರಾಜೀನಾಮೆ ನೀಡಿದರು. ಸ್ವಾತಂತ್ರ್ಯ ನಂತರ ಪಕ್ಷೇತರನಾಗಿ ಜನ ಸಂಘದಿಂದ ಸ್ಪರ್ಧಿಸಿ, ದೇಶದ ಮೊದಲ ಸರ್ಕಾರ ಹಾಗೂ ಜವಾಹರ್​ ಲಾಲ್​ ನೆಹರು ಕ್ಯಾಬಿನೇಟ್​ನಲ್ಲಿ ಕೈಗಾರಿಕಾ ಪೂರೈಕೆ ಸಚಿವರಾದರು. ಆದರೆ, ಕಾಂಗ್ರೆಸ್​ನ ಕಾಶ್ಮೀರ ಧೋರಣೆ ಹಾಗೂ ವಿಶೇಷ 370 ಆರ್ಟಿಕಲ್​ ನೀಡಿದ್ದನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾಶ್ಮೀರದ ಲಾಲ್​ಚೌಕ್​ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಹೋಗುತ್ತಿದ್ದಾಗ ನೆಹರು ಸರ್ಕಾರ ಅವರನ್ನು ಬಂಧಿಸಿ, ಕಾಶ್ಮೀರದಲ್ಲೇ ಗ್ರಹಬಂಧನದಲ್ಲಿಟ್ಟಿತು. ಅಲ್ಲಿಯೇ ಅವರು ಅನುಮಾನಾಸ್ಪದವಾಗಿ ಮೃತಪಟ್ಟರು. ದೇಶದ ವಿಭಜನೆ ವೇಳೆ ಬಂಗಾಲ ಭಾರತದಲ್ಲಿಯೇ ಉಳಿಯುವಂತಾಗಿದ್ದರೆ ಅದಕ್ಕೆ ಮುಖರ್ಜಿ ಅವರ ಹೋರಾಟವೇ ಕಾರಣ ಎಂದು ಮುಖರ್ಜಿ ಅವರ ಜೀವನದ ಸಂಪೂರ್ಣ ವೃತ್ತಾಂತವನ್ನು ಅಜಿತ್​ ಶೆಟ್ಟಿ ತಿಳಿಸಿದರು.

ಉಡುಪಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.