ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(ಫನಾ)ನ ಪ್ರಥಮ ಮಹಿಳಾ ಅಧ್ಯಕ್ಷೆರಾಗಿ ಡಾ.ಶೋಭಾ ಪ್ರಕಾಶ್ ಭಾನುವಾರ ಅಧಿಕಾರ ಸ್ವೀಕರಿಸಿದರು.ಇವರ ಅಧಿಕಾರವಾಧಿ 2025ರಿಂದ 2027ರವರೆಗೆ ಇರಲಿದೆ. ನಗರದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಶೃಂಗಸಭೆಯಲ್ಲಿ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
ಡಾ.ಶೋಭಾಪ್ರಕಾಶ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸುರಕ್ಷತೆ, ಶಿಷ್ಟತೆ ಮತ್ತು ಹೊಸ ತಂತ್ರಾಂಶ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟ ಕಾಪಾಡಲು ಬದ್ಧಳಾಗಿದ್ದೇನೆ. ಆರೋಗ್ಯ ವ್ಯವಸ್ಥೆ ಬುನಾದಿ ಬಲಪಡಿಸುವ ಬಗ್ಗೆ ಹಿರಿಯರ ವೈದ್ಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎಲ್ಲರಿಗೂ ಸಮಾನ, ಗುಣಮಟ್ಟ ಆರೋಗ್ಯ ರಕ್ಷಣೆ ಆಸ್ಪತ್ರೆಗಳಲ್ಲಿ ಹೊಸ ನಾವೀನ್ಯತೆ ಅಳವಡಿಸಿಕೊಳ್ಳಬೇಕು. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಇನ್ನಷ್ಟು ಬಲಗೊಳ್ಳಬೇಕು. ಪ್ರತಿ ಹಂತದಲ್ಲೂ ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ರಾಷ್ಟ್ರೀಯ ಆರೋಗ್ಯ ಶೃಂಗಸಭೆಯಲ್ಲಿ ತೆಗೆದುಕೊಂಡಿರುವ ವಿಚಾರಗಳು ನಿರ್ಣಾಯಕವಾಗಿವೆ. ನಮ್ಮ ಸರ್ಕಾರ ಉತ್ತಮ ಆರೋಗ್ಯ ವ್ಯವಸ್ಥೆ ರೂಪಿಸುತ್ತಿದೆ ಎಂದರು. ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಹಿಳಾ ಸುರಕ್ಷತೆ ಬಗ್ಗೆ ಮಾತನಾಡಿದರು. ನಿರ್ಗಮಿತ ಅಧ್ಯಕ್ಷ ಡಾ.ಗೋವಿಂದಯ್ಯ ಯತೀಶ್, ನಾರಾಯಣ ಹೆಲ್ತ್ ಅಧ್ಯಕ್ಷ ಡಾ.ದೇವಿಶೆಟ್ಟಿ ಮತ್ತಿತರರಿದ್ದರು.