ರಾಯಚೂರಿನಲ್ಲಿ ನಾಗರಿಕ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು. ರಾಘವೇಂದ್ರ ಕುಷ್ಟಗಿ, ಎಸ್.ಮಾರೆಪ್ಪ, ಡಾ.ಬಸವರಾಜ ಕಳಸ, ಚಾಮರಸ ಮಾಲಿಪಾಟೀಲ್, ಜಿ.ಅಮರೇಶ, ಮಾರೆಪ್ಪ ಹರವಿ ಇದ್ದರು. 
ಜಿಲ್ಲೆ

ಪಾಟೀಲ್‌ಗೆ ಜಿಲ್ಲಾ ಉಸ್ತುವಾರಿ ನೀಡಿದಕ್ಕೆ ವಿರೋಧ; ರಾಯಚೂರು ನಾಗರಿಕ ವೇದಿಕೆಯಿಂದ ಪ್ರತಿಭಟನೆ

ಗೋಬ್ಯಾಕ್ ಹೋರಾಟ ಸಜ್ಜು

ರಾಯಚೂರು: ಹೊರ ಜಿಲ್ಲೆಯ ಡಾ.ಶರಣಪ್ರಕಾಶ ಪಾಟೀಲ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿ ರಾಯಚೂರು ನಾಗರಿಕ ವೇದಿಕೆ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕಲಬುರಗಿಗೆ ಏಮ್ಸ್ ಬೇಕು ಎಂದು ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ ನೀಡಿದ್ದಾರೆ. ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡುವ ಮೂಲಕ ಏಮ್ಸ್ ತಪ್ಪಿಲು ಹುನ್ನಾರ ನಡೆಸಲಾಗಿದೆ. ಜಿಲ್ಲೆಯವರಿಗೆ ಉಸ್ತುವಾರಿ ನೀಡುವ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಧರಣಿ ನಡೆಸಲಾಗುತ್ತಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿಯೂ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವ ಭರವಸೆ ನೀಡಲಾಗಿದೆ. ಆದರೆ ಶರಣಪ್ರಕಾಶ ಪಾಟೀಲ್ ಹೇಳಿಕೆ ನೀಡುವ ಮೂಲಕ ಪ್ರಣಾಳಿಕಯಲ್ಲಿ ನೀಡಿದ್ದ ಭರವಸೆಯನ್ನು ಕಡೆಗಾಣಿಸಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಮಾರೆಪ್ಪ ಮಾತನಾಡಿ, ಹಿಂದೆ ಉಸ್ತುವಾರಿ ಸಚಿವರಾಗಿದ್ದಾಗ ಶರಣಪ್ರಕಾಶ ಪಾಟೀಲ್ ಜಿಲ್ಲೆಯ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಿಲ್ಲ. ಅವರು ಜಿಲ್ಲೆಗೆ ಏಮ್ಸ್ ಕೈ ತಪ್ಪಿಸುವ ಹುನ್ನಾರ ನಡೆಸಿದ್ದಾರೆ. ಅವರು ಜಿಲ್ಲೆಗೆ ಆಗಮಿಸಿದರೆ ಗೋಬ್ಯಾಕ್ ಹೋರಾಟ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಜಿ.ಅಮರೇಶ, ಮಾರೆಪ್ಪ ಹರವಿ, ಜೆ.ಬಿ.ರಾಜು, ಪ್ರಭಾಕರ ಪಾಟೀಲ್, ಎಂ.ಆರ್.ಭೇರಿ, ಶಿವಕುಮಾರ ಯಾದವ್, ಖಾಜಾ ಅಸ್ಲಂ, ಜಾನ್‌ವೆಸ್ಲಿ, ಎನ್.ಮಹಾವೀರ, ಬಷೀರ್ ಅಹ್ಮದ್ ಹೊಸಮನಿ ಇನ್ನಿತರರಿದ್ದರು.