ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ವೈದ್ಯಕೀಯ ವಿದ್ಯಾರ್ಥಿ ಡಾ. ಶರಣಪ್ಪ ಶೀನಪ್ಪನವರ ರಾಷ್ಟ್ರಮಟ್ಟದ ಪಿಜಿ-ನೀಟ್ ಪರೀಕ್ಷೆಯಲ್ಲಿ 9ನೇ ರ‌್ಯಾಂಕ್ ಗಳಿಸಿದ್ದಾನೆ.
ವಿದ್ಯಾರ್ಥಿ ಸಾಧನೆ ಕುರಿತು ಮಾತನಾಡಿರುವ ಬಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರಶೆಟ್ಟಿ, ‘ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆದುಕೊಂಡಿರುವ ಡಾ. ಶರಣಪ್ಪ ಶೀನಪ್ಪನವರ ಮೂಲತಃ ಗದಗ ಜಿಲ್ಲೆಯವರು. ಪರೀಕ್ಷೆಯಲ್ಲಿ 9ನೇ ರ‌್ಯಾಂಕ್ ಗಳಿಸಿರುವ ನಮ್ಮ ವಿದ್ಯಾರ್ಥಿ ಬಿಮ್ಸ್ ಸಾಧನೆಗೆ ಕೈಗನ್ನಡಿಯಾಗಿದ್ದಾರೆ. ನಮ್ಮ ಸಂಸ್ಥೆಯ ಶೈಕ್ಷಣಿಕ ಪ್ರಗತಿಗೆ ಶರಣಪ್ಪ ಅವರು ಹೊಸ ಗರಿ ಮೂಡಿಸಿರುವುದು ಸಂತೋಷ ತಂದಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಧನೆಯ ಕನಸಿನೊಂದಿಗೆ ಬಿಮ್ಸ್ ಆವರಣಕ್ಕೆ ಕಾಲಿಟ್ಟಿದ್ದೆ. ಕಾಲೇಜು ವಾತಾವರಣಕ್ಕೆ ಹೊಂದಿಕೊಂಡು ನಿಶ್ಚಿತವಾದ ಗುರಿ ತಲುಪಲು ದೃಢ ಸಂಕಲ್ಪದೊಂದಿಗೆ ದಿನಕ್ಕೆ 10 ಗಂಟೆ ತಪಸ್ಸಿನಂತೆ ಓದಿರುವ ಪ್ರತಿಫಲವೇ ಈ ಫಲಿತಾಂಶ ಎಂದು ಡಾ.ಶರಣಪ್ಪ ಶೀನಪ್ಪನವರ ಪ್ರತಿಕ್ರಿಯಿಸಿದರು.