ಜಿಲ್ಲೆ

ಕನ್ನಡ ಉಳಿಸಿ ಬೆಳೆಸಲು ಷ.ಶೆಟ್ಟರ್ ಸರಳ ಸಲಹೆ

ಶ್ರೀವಿಜಯ ಪ್ರಧಾನ ವೇದಿಕೆ: ಕನ್ನಡ ಉಳಿಸಿ ಬೆಳೆಸಲು ಯಾವ ಮಾರ್ಗ ಅನುಸರಿಸಿದರೆ ಉತ್ತಮ ಎಂದು ಸಂಶೋಧಕ ಹಾಗೂ ಸಾಹಿತಿ ಡಾ.ಷ. ಶೆಟ್ಟರ್ ನಾಡಿನ ಜನರಿಗೆ ಸರಳ ಸಲಹೆಗಳನ್ನು ನೀಡಿದರು. ವಿಶೇಷ ಉಪನ್ಯಾಸ ನೀಡಿದ ಅವರು, ರಾಜರ ಆಳ್ವಿಕೆ ಕಾಲಘಟ್ಟದ ಕನ್ನಡ ಪೋಷಣೆ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಕನ್ನಡ ಬೆಳೆಸುವಲ್ಲಿ ಅಧ್ಯಾಪಕರು, ಮಕ್ಕಳು ಮತ್ತು ಸರ್ಕಾರದ ಪಾತ್ರ ಮುಖ್ಯ. ಆದರೆ ಇಂದಿನ ಪರಿಸ್ಥಿತಿ ಮೂರು ವ್ಯಕ್ತಿಗಳ ಪಾತ್ರ ಶೋಚನೀಯವಾಗಿದೆ ಎಂದರು

  • ರಾಜ್ಯ ಸರ್ಕಾರ ಕನ್ನಡಪರ ಯೋಜನೆಗಳನ್ನು ಘೊಷಿಸುವ ಮೂಲಕ ತನ್ನ ಜವಾಬ್ದಾರಿ ನಿಭಾಯಿಸಿದೆ. ಶಾಲೆಗಳ ನಿರ್ವಣದಿಂದ ಕನ್ನಡ ಉಳಿಯುವುದು ಒಂದು ಭಾಗ.
  • ಕನ್ನಡಕ್ಕೆ ಅಳಿಗಾಲದ ಸಂಕೇತವಿಲ್ಲ. ಎಲ್ಲಿವರೆಗೆ ನಾವು ಕನ್ನಡ ಮಾತನಾಡುತ್ತೇವೋ ಅಲ್ಲಿಯತನಕ ನಮ್ಮ ಭಾಷೆಗೆ ಆಪತ್ತಿಲ್ಲ.
  • ಅನೇಕ ಹೋರಾಟ, ಘಟ್ಟಗಳ ಮೂಲಕ 21ನೇ ಶತಮಾನದವರೆಗೂ ಕನ್ನಡ ಬಂದು ನಿಂತಿದೆ. ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.
  • ತನ್ನ ಭಾಷೆ ಬೆಳೆಸದಿದ್ದರೆ ಕೀಳರಿಮೆ ಹಾಗೂ ಆತಂಕಗಳು ಸೃಷ್ಟಿಯಾಗುತ್ತವೆ. ಅಂಥವರು ಅಲ್ಪಸಂಖ್ಯಾತರು ಆಗಿರುತ್ತಾರೆ.
  • ಭಾಷೆ ಬೆಳೆಸುವ ಅಥವಾ ಉಳಿಸುವುದೆಂದರೆ ಬೇರೊಂದು ಭಾಷೆಯನ್ನು ದ್ವೇಷಿಸುವುದಲ್ಲ. ಅನ್ಯ ಭಾಷೆಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು.
  • ಕನ್ನಡ ನಾಡಿನ ಜನರು ಇಡೀ ವಿಶ್ವದಲ್ಲಿ ನೆಲೆಸಿದ್ದಾರೆ. ಅವರಿಗೆ ಭಾಷೆ ಮೇಲಿನ ಕಳಕಳಿ ಮತ್ತು ಪ್ರೀತಿ ನೋಡಿದಾಗ ನಮಗೆ ನಾಚಿಕೆ ಆಗಬೇಕು.
  • ಹೊರನಾಡು ಕನ್ನಡಿಗರು ಮಾಡುತ್ತಿರುವ ಕನ್ನಡಪರ ಕೆಲಸಗಳು ನಮಗೆ ಮಾರ್ಗಸೂಚಿ. ಮುದೊಂದು ದಿನ ಕನ್ನಡ ವಿಶ್ವಭಾಷೆಯಾಗುವ ಸಾಧ್ಯತೆ ಇದೆ.
  • ಮಕ್ಕಳು ಮನೆಯಲ್ಲಿ ಕನ್ನಡ ಮಾತನಾಡಿ, ರಸ್ತೆಯಲ್ಲಿ ಇಂಗ್ಲಿಷ್ ಮಾತನಾಡುವ ಕೀಳರಿಮೆ ಹೋಗಲಿ.
  • ಪ್ರಾಧ್ಯಾಪಕರು ಅವರ ಮಕ್ಕಳಿಗೆ ಕನ್ನಡ ಭಾಷಾ ಮಾಧ್ಯಮ ಶಾಲೆಗಳಲ್ಲಿ ವಿದ್ಯಾಭ್ಯಾಸ ನೀಡುತ್ತಿಲ್ಲ. ನೀಡುವಂತಾಗಲಿ.

ಸರ್ಕಾರದ ನಿರುತ್ಸಾಹ

ಕನ್ನಡದ ಬಗ್ಗೆ ಸಂಶೋಧನೆ ಮತ್ತು ಶಾಸ್ತ್ರೀಯ ಭಾಷಾ ಸಂಸ್ಥೆ ನಿರ್ಮಾಣಕ್ಕೆ ಯಾವುದೇ ಸರ್ಕಾರ ಉತ್ಸಾಹ ತೋರಿಸಿಲ್ಲ ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಈಗಿನ ಸರ್ಕಾರವಾದರೂ ಚಿಂತನೆ ನಡೆಸಬೇಕಿದೆ. ದಕ್ಷಿಣ ಭಾಷೆಗಳಲ್ಲಿ ಕನ್ನಡ ಪುರಾತನ. ಈ ನಡುವೆಯೂ ಕನ್ನಡ ಶಾಸ್ತ್ರೀಯ ಭಾಷೆಗೆ ಅನೇಕ ಹೋರಾಟಗಳು ನಡೆದಿವೆ. ಭಾಷಾ ಸಂಶೋಧನೆಯನ್ನು ಪ್ರೋತ್ಸಾಹಿಸಲು ಶಾಸ್ತ್ರೀಯ ಭಾಷಾ ಸಂಸ್ಥೆ ತಕ್ಷಣ ಸ್ಥಾಪಿಸಬೇಕು ಎಂದರು.

ಪುರಂದರ ಪ್ರಾಧಿಕಾರ ಸ್ಥಾಪನೆಗೆ ಆಗ್ರಹ

ಬದುಕನ್ನು ಪ್ರೀತಿಸುವ, ಬದುಕಿನಲ್ಲಿ ಎಲ್ಲರನ್ನೂ ಗೌರವದಿಂದ ಕಾಣುವ, ಅಂಜದೆ, ಅಳುಕದೆ ಬಹದ್ದೂರಿಯಿಂದ ಬದುಕುವ ಸ್ಥೈರ್ಯ, ಸಂದೇಶವನ್ನು ದಾಸಸಾಹಿತ್ಯ ನೀಡಿದೆ. ಯಾವುದೇ ಸೌಕರ್ಯಗಳಿಲ್ಲದ ಕಾಲದಲ್ಲಿ ಪುರಂದರದಾಸರು 500 ವರ್ಷಗಳ ಕಾಲ ನೀತಿ, ಸಂಸ್ಕೃತಿ, ವಿಚಾರ ಕೊಟ್ಟರು. ಪುರಂದರ ವಿಚಾರವನ್ನು ಕಾಣುವ ಎಲ್ಲ ಕಿಟಕಿಗಳೂ ತೆರೆದುಕೊಳ್ಳಬೇಕಿದೆ.

ಅದಕ್ಕಾಗಿ ಪುರಂದರ ಪ್ರಾಧಿಕಾರವನ್ನು ಸರ್ಕಾರ ಸ್ಥಾಪಿಸಬೇಕು, ಪುರಂದರದಾಸರ ಜನ್ಮಸ್ಥಳ ವಿಷಯವನ್ನು ಇತ್ಯರ್ಥಗೊಳಿಸಬೇಕು ಎಂದು ಖ್ಯಾತ ವಾಗ್ಮಿ, ದಾಸ ಸಾಹಿತ್ಯ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದರು. ಕೀರ್ತನ-ದಾಸಸಾಹಿತ್ಯ ವಿಷಯದ ಬಗ್ಗೆ ಮಾತನಾಡಿ, ಪುರಂದರ ಸಂಸ್ಕೃತಿಯ ಪುನರುತ್ಥಾನ ಆಗಬೇಕಿದೆ. ಹಿಂದೆ ಪ್ರಕಟವಾಗಿದ್ದ ಸಮಗ್ರ ಹರಿದಾಸ ಸಾಹಿತ್ಯ ಈಗ ಲಭ್ಯವಿಲ್ಲ. ಸರ್ಕಾರ ವಿದ್ವಾಂಸರ ಮಂಡಳಿ ರಚಿಸಿ, ಸಮಗ್ರ ಹರಿದಾಸ ಸಾಹಿತ್ಯ ಪರಿಷ್ಕರಿಸಿ, ಮರು ಮುದ್ರಿಸಬೇಕು. ಕಲಬುರಗಿ ಅಥವಾ ರಾಯಚೂರನ್ನು ಮುಖ್ಯ ಕೇಂದ್ರವಾಗಿಸಿಕೊಂಡು ರಾಷ್ಟ್ರೀಯ ಹರಿದಾಸ ಅಧ್ಯಯನ ಮಂಡಳಿ ಸ್ಥಾಪಿಸಬೇಕೆಂದರು.