ಜಿಲ್ಲೆ

ಸಚಿವ ಚಲುವರಾಯಸ್ವಾಮಿ ವಿರುದ್ಧ ನಕಲಿ ದೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ವಾಗ್ದಾಳಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧದ ದೂರು ನಕಲಿ ಎಂಬುದು ಈಗಾಗಲೇ ಬಯಲಾಗಿದೆ. ನಿಜವಾಗಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆ ಇದ್ದರೆ ಬಿಡುಗಡೆ ಮಾಡಬೇಕು. ಅದನ್ನು ಬಿಟ್ಟು ಬಿಜೆಪಿ ಬಂಡಾಟಕ್ಕೆ ಪ್ರತಿಭಟನೆ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ವಾಗ್ದಾಳಿ ನಡೆಸಿದರು.

ಧರಣಿಯಲ್ಲಿ ಮಾತನಾಡಿದ ಅವರು, ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವುದು ನಕಲಿ ದೂರಾಗಿದೆ. ಹೀಗಿರುವಾಗ ಯಾವ ಕಾರಣಕ್ಕೆ ಚಲುವರಾಯಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪಕ್ಷವನ್ನು ಪ್ರಶ್ನಿಸಿದ ಅವರು, ರಾಜ್ಯಪಾಲರಿಗೆ ದೂರು ಹೋಗಿದೆ, ಅವರು ಪರಿಶೀಲಿಸಿ ಎಂದಿದ್ದಾರೆ, ಅಷ್ಟಕ್ಕೆ ರಾಜೀನಾಮೆ ಕೊಡಬೇಕಾ?. ಬಿಬಿಎಂಪಿ ಕಚೇರಿಗೆ ಮುನಿರತ್ನ, ಅಶ್ವಥ್ ನಾರಾಯಣ ಬೆಂಕಿ ಹಚ್ಚಿಸಿ ಪ್ರಮುಖ ದಾಖಲೆಗಳನ್ನು ಸುಟ್ಟು ಹಾಕಿದಾಗ ಅವರು ರಾಜೀನಾಮೆ ನೀಡಿದ್ದರಾ, ಸಚಿವರ ರಾಜೀನಾಮೆ ಕೇಳಲು ಬಿಜೆಪಿ ಪಕ್ಷಕ್ಕೆ ನೈತಿಕ ಹಕ್ಕು ಇಲ್ಲ ಎಂದು ಹೇಳಿದರು.

ಕೃಷಿ ಇಲಾಖೆಯಲ್ಲಿ ಲಂಚದ ದಂಧೆ ನಡೀತಿದೆ ಎಂದು ಸದನದಲ್ಲಿ ಪೆನ್‌ಡ್ರೈವ್ ತೋರಿಸಿ ಅದನ್ನು ಒಳಗೆ ಇಟ್ಟುಕೊಂಡು ಹೋಗುವುದು ಏನರ್ಥ. ಇದೇನು ಹೊಂದಾಣಿಕೆನಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನ ಪ್ರಶ್ನಿಸಿದ ಅವರು, ದಾಖಲಾತಿ ಇದೆ ಎಂದು ತೋರಿಸಿ ಅದನ್ನು ಬಹಿರಂಗ ಮಾಡದೆ ಸಾಕ್ಷಿ ಮುಚ್ಚಿಡುವುದು ಕ್ರಿಮಿನಲ್ ಅಪರಾಧ ಎಂದು ಹೇಳಿದರು.

ಗುತ್ತಿಗೆದಾರರಿಗೆ ಹಣ ಪಾವತಿಸುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳಿಲ್ಲ. ಕಾಮಗಾರಿ ಬಗ್ಗೆ ಪರಿಶೀಲಿಸುವುದಾಗಿ ಹೇಳಿದೆ. ಪರಿಶೀಲನೆ ಮಾಡದೆ ಹಣ ನೀಡಿ ಎಂದು ಹೇಳುತ್ತಿರುವುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಇ.ಡಿ.ಯಲ್ಲಿ ಮತ್ತೊಂದು ದೂರು ದಾಖಲಿಸುವ ಹುನ್ನಾರವೇ?. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40ರಷ್ಟು ಕಮಿಷನ್ ನಡೆಯುತ್ತಿತ್ತು. ಮೂರು ವರ್ಷ ಸುಮ್ಮನಿದ್ದ ಗುತ್ತಿಗೆದಾರರು ನೂತನ ಸರ್ಕಾರ ಬಂದ ಮೂರು ತಿಂಗಳಲ್ಲಿ ಹಣ ಪಾವತಿಸಿ ಎಂದು ಕೇಳುತ್ತಿರುವುದು ಸರಿಯಲ್ಲ. ಕಾಮಗಾರಿ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು ಎಂದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಡಿಸಿಸಿ ಅಧ್ಯಕ್ಷ ಸಿ.ಡಿ.ಗಂಗಾಧರ್, ಅಂಜನಾ ಶ್ರೀಕಾಂತ್, ಕಿಕ್ಕೇರಿ ಸುರೇಶ್, ನಾಗೇಂದ್ರ, ತ್ಯಾಗರಾಜು, ವಿಜಯ್‌ರಾಮೇಗೌಡ, ಸಿಎಂ.ದ್ಯಾವಪ್ಪ, ಕೃಷ್ಣೇಗೌಡ, ಸಾತನೂರು ಕೃಷ್ಣ, ರಾಜಣ್ಣ ಮತ್ತಿತರರಿದ್ದರು.