ಮಂಡ್ಯ: ವರನಟ ಡಾ.ರಾಜ್‌ಕುಮಾರ್ ಜಯಂತಿ ಅಂಗವಾಗಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿರುವ ಡಾ.ರಾಜ್‌ಕುಮಾರ್ ಪುತ್ತಳಿಗೆ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಡಿ.ಅಶೋಕ್ ಮತ್ತು ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಬಳಿಕ ಜಮ್ಮು-ಕಾಶ್ಮೀರದ ಪಹಲ್ಗಾಮ ಉಗ್ರರ ದಾಳಿದ ಮಡಿದವರಿಗೆ ಸಂತಾಪ ಸೂಚಿಸಿದರು.
ಬಳಿಕ ಮಾತನಾಡಿದ ಅವರು, ಈ ವರ್ಷ ಡಾ.ರಾಜ್‌ಕುಮಾರ್ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿಲ್ಲ. ಕಾರಣ ನಮ್ಮ ಕನ್ನಡಿಗರು ಮತ್ತು ದೇಶದ ಪ್ರವಾಸಿಗರನ್ನು ಜಮ್ಮು-ಕಾಶ್ಮೀರದ ಪಹಲ್ಗಾಮದಲ್ಲಿ ಉಗ್ರರು ಕೊಂದು ಅಟ್ಟಹಾಸ ಮೆರೆದಿದ್ದಾರೆ ಎಂದರು.
ಕನ್ನಡದ ಅಪ್ಪಟ ಅಭಿಮಾನಿ ಡಾ.ರಾಜ್ ಅವರು ಹುಟ್ಟಿದ್ದು ಮತ್ತು ನಿಧನರಾಗಿದ್ದ ಒಂದೇ ತಿಂಗಳಲ್ಲಿ ಎನ್ನುವುದು ಕಾಕತಾಳಿಯ. ಅವರು ಅಭಿನಯಿಸಿರುವ ಕನ್ನಡ ಸಿನಿಮಾಗಳು ಒಂದೊಂದು ಸಂದೇಶನ್ನು ನೀಡುತ್ತವೆ. ಮನೆ ಜನರೆಲ್ಲ ನೋಡುವಂತಹ ಸದಾಭಿರುಚಿ, ರೋಮಾಂಚನಕಾರಿ, ಪೌರಾಣಿಕ ಚಿತ್ರಗಳಲ್ಲಿ ಅಭಿನಯಿಸಿ ವಿಶ್ವವಿಖ್ಯಾತವಾಗಿದ್ದಾರೆ ಎಂದು ತಿಳಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ರಾಜ್‌ಕುಮಾರ್ ಕನ್ನಡ ಚಿತ್ರರಂಗದ ದೊಡ್ಡ ಆಸ್ತಿಯಾಗಿದ್ದಾರೆ. ಆದರೀಗ ಕನ್ನಡ ಚಿತ್ರರಂಗ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ನಮ್ಮ ಕನ್ನಡ ಸಂಸ್ಕೃತಿಗೆ ಮಾರಕವಾದ ವಾತಾವರಣವಿದೆ. ಚಿತ್ರರಂಗದ ಉಳಿವು ಬಹುದೊಡ್ಡ ಸವಾಲಾಗಿದೆ ಎಂದರು.
ಕರವೇ ಜಿಲ್ಲಾ ಕಾರ್ಯದರ್ಶಿ ರಾಜೇಶ್, ಚಿತ್ರನಟ ಸಂಜುಕುಮಾರ್, ಉಪಾಧ್ಯಕ್ಷರಾದ ಶ್ರೀನಿವಾಸ್, ಹೊಳಲು ನಾಗರಾಜ್, ನಗರಾಧ್ಯಕ್ಷ ಕಾರ್ತಿಕ್, ಮಲ್ಲೇಶ್, ಆನಂದ, ಅಂಬರೀಷ್ ಇತರರಿದ್ದರು.