ಜಿಲ್ಲೆ

ಡಾ.ರಾಜೇಶ್ ಮರು ನೇಮಕಕ್ಕೆ ಆಗ್ರಹ

ಅರಕಲಗೂಡು: ತಾಲೂಕಿನ ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಡಾ.ರಾಜೇಶ್ ಅವರನ್ನು ಮರು ನೇಮಕ ಮಾಡುವುದರ ಜತೆಗೆ ಕಾಯಂಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಜಮಾಯಿಸಿದ ಗ್ರಾಮಸ್ಥರು, ಡಾ.ರಾಜೇಶ್ ಅವರನ್ನು ಮರುನೇಮಕ ಮಾಡಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಅನುವು ಮಾಡಿಕೊಡಬೇಕು ಎಂದು ಘೋಷಣೆ ಕೂಗಿದರು.

ಸಮ ಸಮಾಜ ವೇದಿಕೆ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಲ ದಿನಗಳ ಹಿಂದೆ ಡಾ.ರಾಜೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ರೋಗಿಗಳ ಪಾಡು ಹೇಳತೀರದಾಗಿದೆ. ಸರ್ಕಾರ ಅವರ ಬೇಡಿಕೆ ಈಡೇರಿಸಿ ಮಾನವೀಯತೆ ಮೆರೆಯಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಹರೀಶ್, ನೀರು ಬಳಕೆದಾರರ ಸಂಘದ ಮುಖಂಡ ಸುಬ್ರಹ್ಮಣ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಕೆ.ಪ್ರಕಾಶ್, ಮಹೇಶ್, ಮುಖಂಡರಾದ ಕಂಬೇಗೌಡ, ಗಿರೀಶ್, ಬಿ.ಪಿ.ಮಹದೇವ್, ಸಮೀರ್, ಗಂಗಾರಾಜು, ಬಿ.ಜಿ ಕೆಂಡಗಣ್ಣ, ವಕೀಲ ಸಂತೋಷ್ ಪಾಲ್ಗೊಂಡಿದ್ದರು.