ಮಳವಳ್ಳಿ ತಾಲೂಕಿನ ಬೆಳಕವಾಡಿಯಲ್ಲಿ ಶುಕ್ರವಾರ ಡಾ.ರಾಜ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯದಲ್ಲಿ ಮಯೂರ ತಂಡದ ಸದಸ್ಯರು ಪ್ರಥಮ ಸ್ಥಾನ ಪಡೆದುಕೊಂಡು ವಿಜಯೋತ್ಸವ ಆಚರಿಸಿದರು. ಕುಮಾರಸ್ವಾಮಿ, ಮಧು ಗಂಗಾಧರ್, ಕೆಂಪಣ್ಣ, ಅರ್ಷದ್ ಪಟೇಲ್, ಪ್ರಕಾಶ್, ಮೇದನಿ ಮಹದೇವಸ್ವಾಮಿ ಇತರರು ಇದ್ದರು. 
ಜಿಲ್ಲೆ

ಮಯೂರ ತಂಡಕ್ಕೆ ಡಾ.ರಾಜ್ ಕ್ರಿಕೆಟ್ ಕಪ್

ಮಳವಳ್ಳಿ: ತಾಲೂಕಿನ ಬೆಳಕವಾಡಿಯಲ್ಲಿ ಡಾ.ರಾಜಕುಮಾರ್ ಜನ್ಮದಿನದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಮಯೂರ ತಂಡ ಡಾ.ರಾಜ್ ಕ್ರಿಕೆಟ್ ಕಪ್ ಪಡೆದುಕೊಂಡಿತು. ಬಬ್ರುವಾಹನ ತಂಡ ದ್ವಿತೀಯ ಸ್ಥಾನ ಗಳಿಸಿತು.

ಗ್ರಾಮದ ಸಾರ್ವಜನಿಕ ಪ್ರೌಢಶಾಲಾ ಆವರಣದಲ್ಲಿ ಡಾ.ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಎಂ.ಕುಮಾರಸ್ವಾಮಿ ಅವರು ಡಾ.ರಾಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿ, ವರನಟ ಡಾ.ರಾಜಕುಮಾರ್ ಅವರು ಕರ್ನಾಟಕದ ಹೆಮ್ಮೆ. ಅಭಿನಯದ ಮೂಲಕ ಕೋಟ್ಯಂತರ ಕಲಾಭಿಮಾನಿಗಳ ಹೃದಯದಲ್ಲಿ ಇಂದಿಗೂ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಪ್ರಾಥಮಿಕ ಶಿಕ್ಷಣ ಕಲಿತಿದ್ದ ಡಾ.ರಾಜ್ ಅವರ ಭಾಷಾ ಪಾಂಡಿತ್ಯ ಹಾಗೂ ನಟನ ಕೌಶಲ, ಸಾಹಿತ್ಯ, ಸಂಗೀತ ಜ್ಞಾನ ಅಪರಿಮಿತವಾಗಿದೆ. ಪ್ರತಿಭೆಗೆ ವಿದ್ಯೆಯೇ ಮಾನದಂಡವಲ್ಲ ಎಂಬುದನ್ನು ಸಾಬೀತುಪಡಿಸಿದ ಅಪ್ಪಟ ಕನ್ನಡದ ಕುವರ ಎಂದು ತಿಳಿಸಿದರು.

ಕಲಾ ಸೇವೆಗಾಗಿ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಹಾಗೂ ಕರ್ನಾಟಕ ರತ್ನ ಸೇರಿದಂತೆ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡು ಕನ್ನಡ ಮತ್ತು ಕರ್ನಾಟಕದ ಹೆಸರನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದರು ಎಂದು ಸ್ಮರಿಸಿದರು.

ವಿಜೇತ ತಂಡಕ್ಕೆ ಸಮಾಜ ಸೇವಕ ಮಧು ಗಂಗಾಧರ್ ಪ್ರಶಸ್ತಿ ವಿತರಿಸಿದರು. ದ್ವಿತೀಯ ಸ್ಥಾನ ಪಡೆದ ಬಬ್ರುವಾಹನ ತಂಡಕ್ಕೆ ಉದ್ಯಮಿ ಕೆಂಪಣ್ಣ ಪ್ರಶಸ್ತಿ ನೀಡಿದರು. ಮುಖಂಡರಾದ ಅರ್ಷದ್ ಪಟೇಲ್, ಪ್ರಕಾಶ್, ಮೇದನಿ ಮಹದೇವಸ್ವಾಮಿ, ಡಾ.ರಾಜ್ ಅಭಿಮಾನಿ ಬಳಗದ ಸದಸ್ಯರಾದ ಹರೀಶ್, ಅಭಿಲಾಷ್, ಶ್ರೀಧರ, ಸಂಜು, ಆದರ್ಶ್, ಸಚಿನ್, ರಘು, ಸೂರಿ, ನವೀನ್, ಚಂದು, ಶಿವು, ಪ್ರಮೋದ್ ಇತರರು ಇದ್ದರು.