ಜಿಲ್ಲೆ

ಶಾಸ್ತ್ರೀಯ ಸಾಹಿತ್ಯ ಬಗ್ಗೆ ಕನ್ನಡಿಗರಲ್ಲಿ ಹೆಮ್ಮೆಯಿರಲಿ: ಡಾ.ಪುರುಷೋತ್ತಮ ಬಿಳಿಮಲೆ ಅಭಿಮತ

ಬೆಂಗಳೂರು: ಕನ್ನಡದಲ್ಲಿ ಶಾಸ್ತ್ರೀಯ ಸಾಹಿತ್ಯ ರೂಪುಗೊಂಡ ಬಗೆಯು ಇತರೆ ಐದು ಶಾಸ್ತ್ರೀಯ ಭಾಷೆಗಳಿಗಿಂತ ಭಿನ್ನವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಕನ್ನಡಿಗರಲ್ಲಿ ಹೆಮ್ಮೆ ಇರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಗಳ ಒಕ್ಕೂಟ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ 'ಶಾಸ್ತ್ರೀಯ ಭಾಷೆಯಾಗಿ ಕನ್ನಡ&ಇತ್ತೀಚಿನ ಸವಾಲು ಮತ್ತು ಸಾಧ್ಯತೆ' ಚಿಂತನಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಬೌದ್ಧರ ಹೆಚ್ಚಿನ ಶಾಸನಗಳು ಕರ್ನಾಟಕದಲ್ಲಿ ಲಭಿಸಿವೆ. ಹೀಗಾಗಿ ಕರ್ನಾಟಕದ ಸಂಸತಿಯ ಮೇಲೆ ಬೌದ್ಧ ಸಂಸತಿಯ ಪರಿಣಾಮ ಇದೆ. ಶಾಸ್ತ್ರೀಯ ಕನ್ನಡದೊಳಗೆ ಬೌದ್ಧ ಧರ್ಮದ ಯಾವುದಾದರೂ ವಚನಗಳು ಇವೆಯೇ ಎಂಬುದನ್ನು ಹುಡುಕಬೇಕಿದೆ. ಶಾಸ್ತ್ರೀಯ ಕನ್ನಡದ ಮೇಲೆ ಬೌದ್ಧ ಧರ್ಮ ಹೇಗೆ ಪ್ರಭಾವ ಬೀರಿದೆ ಎಂಬ ಬಗೆಗಿನ ಸಂಶೋಧನೆಯನ್ನು ಮುಂದುವರಿಸುವಂತೆ ಕೆಲಸ ಮಾಡಬೇಕಾಗಿದೆ ಎಂದರು.

ಹಿರಿಯ ಸಂಶೋಧಕಿ ಡಾ.ಎನ್​.ಎಸ್​. ಅನ್ನಪೂರ್ಣ ಮಾತನಾಡಿ, ಕನ್ನಡದ ಬಗೆಗಿನ ಹಲವಾರು ಪ್ರಶ್ನೆಗಳಲ್ಲೇ ನಾವಿಂದು ವಿಹರಿಸುತ್ತಿದ್ದೇವೆ. ಒಂದು ಅಡಿಪಾಯದ ಭಾಷೆಯಾಗಿರುವ ಕನ್ನಡದ ಪ್ರಶ್ನೆಗಳೇ ಇಂದು ಮೂಲಭೂತವಾಗಿ ಸರಿಪಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದೇವೆ ಎಂದರು.

ಪಂಪ, ರನ್ನ ಮುಂತಾದವರ ಕವಿ ಪರಂಪರೆ ಸಾಗಿ ಬರದ ಹೊರತು, ನಾವಿಂದು 'ನನ್ನ ಕನ್ನಡ' ಮಾತನಾಡಲು ಸಾಧ್ಯವಾಗುತ್ತಿತ್ತೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಪಂಪ ಆದಿಯಾಗಿ ಎಲ್ಲ ಕವಿಗಳ ಕನ್ನಡವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವುದು ನಮ್ಮ ಕರ್ತವ್ಯ. ಇದು ಕೇವಲ ಸಂಶೋಧಕರಿಗೆ ಮಾತ್ರ ಸೀಮಿತವಾದುದಲ್ಲ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಇದ್ದರು.

ಗದ್ಯ-ಪದ್ಯ ಸಮ್ಮಿಶ್ರವಾದಂತಹ 'ಚಂಪೂ' ಸಾಹಿತ್ಯ ಕರ್ನಾಟಕದಲ್ಲಿ ಹುಟ್ಟಿದ್ದಾಗಿದೆ. ಛಂದೋ ಪರಂಪರೆ ಸಂಪೂರ್ಣ ಶಾಸ್ತ್ರೀಯ ಕನ್ನಡದ ಜೀವಸತ್ವವನ್ನು ನಿಯಂತ್ರಿಸಿದೆ. ಇದು ಭಾರತೀಯ ಸಾಹಿತ್ಯಕ್ಕೆ ಕರ್ನಾಟಕ ಶಾಸ್ತ್ರೀಯ ಸಾಹಿತ್ಯದ ಕೊಡುಗೆಯಾಗಿದೆ. ಇಂತಹ ಸಂಗತಿಗಳು ಕನ್ನಡಿಗರ ಹೆಮ್ಮೆಗೆ ಕಾರಣವಾಗಬೇಕು.

-ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ