ಜಿಲ್ಲೆ

ಡಿಜಿಟಲ್​ ಗ್ರಂಥಾಲಯ ಇಂದಿನ ಅಗತ್ಯ; ಡಾ. ಪುರುಷೋತ್ತಮ ಬಿಳಿಮಲೆ ಅಭಿಮತ

ಬೆಂಗಳೂರು: ಆಧುನಿಕ ಕಾಲದಲ್ಲಿ ಸಾಹಿತ್ಯ ಕೃತಿಗಳು ಡಿಜಿಟಲ್​ ರೂಪದಲ್ಲಿ ಲಭ್ಯವಾಗಬೇಕು. ಆ ನಿಟ್ಟಿನಲ್ಲಿ ಗ್ರಂಥಾಲಯಗಳೂ ಡಿಜಿಟಲೀಕರಣಗೊಳ್ಳಬೇಕು ಎಂದು ಜೆಎನ್​ಯು ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

'2ನೇ ಇಂಡಿಯನ್​ ಲೈಬ್ರರಿ ಕಾಂಗ್ರೆಸ್​ ಸಂಟನಾ ಸಮಿತಿ' ವತಿಯಿಂದ ಸೆಂಟ್ರಲ್​ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2ನೇ ಭಾರತೀಯ ಗ್ರಂಥಾಲಯ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

1970ರ ದಶಕದಲ್ಲಿ ಗ್ರಂಥಾಲಯವು ವಿದ್ಯಾರ್ಥಿಗಳ ಅವಿಭಾಜ್ಯ ಅಂಗವಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯೂ ಗ್ರಂಥಾಲಯದಲ್ಲಿ ಸಮಯ ಕಳೆಯುತ್ತಿದ್ದ. ಶಿಕ್ಷಕರೂ ಓದಿನ ಆಸಕ್ತಿ ಹುಟ್ಟಿಸುತ್ತಿದ್ದರು. ಆದರೆ ಜಾಗತೀಕರಣದ ಪ್ರಭಾವದಿಂದ 90ರ ದಶಕದ ನಂತರ ಪರಿಸ್ಥಿತಿ ಬದಲಾಗುತ್ತ ಸಾಗಿತು. ಜ್ಞಾನದ ಮಟ್ಟವನ್ನು ವಿಸ್ತರಿಸುವುದೇ ಸವಾಲಾಗಿರುವ ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಅನಿವಾರ್ಯತೆಯಿದೆ ಎಂದರು.

ಜ್ಞಾನವರ್ಧನೆ ಸಾಧ್ಯವಿಲ್ಲ:

ಗ್ರಂಥಾಲಯ ಜ್ಞಾನ ಹಾಗೂ ವಿಮರ್ಶಾತ್ಮಕ ಪ್ರಜ್ಞೆ ಬೆಳೆಸುತ್ತದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ರವಾನೆಯಾಗುತ್ತಿದೆ. "ವಾಟ್ಸ್​ಆ್ಯಪ್​ ವಿಶ್ವವಿದ್ಯಾಲಯ' ನಮ್ಮ ಗ್ರಂಥಾಲಯ ಪದ್ಧತಿಯನ್ನು ಆವರಿಸಿಕೊಂಡಿದೆ. ಆದರೆ ಇದರಿಂದ ಜ್ಞಾನವರ್ಧನೆ ಸಾಧ್ಯವಿಲ್ಲ ಎಂದು ಡಾ. ಬಿಳಿಮಲೆ ತಿಳಿಸಿದರು.

ಆಡಳಿತಗಾರರಿಂದ ಸಂವಿಧಾನದ ಪ್ರಸ್ತಾವನೆ ಹಾಗೂ ಜಾತ್ಯಾತಿತತೆಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಲೈಬ್ರರಿ ಕಾಂಗ್ರೆಸ್​ ದನಿ ಎತ್ತಿತ್ತು. ಇದೀಗ ನಾವು ಗ್ರಂಥಾಲಯಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ (ಕೇರಳ) ವಿ. ಶಿವದಾಸನ್​ ಹೇಳಿದರು.

ರಾಜ್ಯಸಭಾ ಸದಸ್ಯ ಡಾ.ಎಲ್​. ಹನುಮಂತಯ್ಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್​ ಕುಮಾರ್​ ಹೊಸಮನಿ, ಬೆಂಗಳೂರು ವಿವಿಯ ಗ್ರಂಥಾಲಯ ವಿಜ್ಞಾನ ವಿಭಾಗದ ಪ್ರೊ. ರಮೇಶ್​, ಈ. ಬಸವರಾಜು, ಎನ್​. ಪ್ರಭಾ ಬೆಳವಂಗಳ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ವಿಚಾರಗೋಷ್ಠಿ

ಅಧಿವೇಶನದಲ್ಲಿ "ಭಾರತದಲ್ಲಿ ಗ್ರಂಥಾಲಯಗಳ ಉಗಮ ಮತ್ತು ಬೆಳವಣಿಗೆ', "ವೈಜ್ಞಾನಿಕ ಮನೋಭಾವ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಗ್ರಂಥಾಲಯ', "ಗ್ರಾಮೀಣ ಗ್ರಂಥಾಲಯಗಳು& ಎಲ್ಲಿದ್ದೇವೆ? ಎಲ್ಲಿರಬೇಕು?' ಮತ್ತಿತರ ವಿಷಯಗಳನ್ನಾಧರಿಸಿದ ವಿಚಾರಗೋಷ್ಠಿಗಳಲ್ಲಿ ತಜ್ಞರು ವಿಚಾರ ಮಂಡಿಸಿದರು.

ವಿದೇಶಿ ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ವ್ಯಾಸಂಗಕ್ಕೆ ಬರುವುದು ನಿಜವಾದ ಜಾಗತೀಕರಣ. ಮುಂದಿನ ಹತ್ತು ವರ್ಷಗಳಲ್ಲಿ ಸಾಕಷ್ಟು ವಿದೇಶಿಗರು ಭಾರತಕ್ಕೆ ವ್ಯಾಸಂಗಕ್ಕಾಗಿ ಆಗಮಿಸುತ್ತಾರೆ. ಹೀಗಾಗಿ ನಮ್ಮ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಳ್ಳಬೇಕು.

-ಡಾ. ಪುರುಷೋತ್ತಮ ಬಿಳಿಮಲೆ, ಸಾಹಿತಿ